×
Ad

ಎಪಿಎಂಸಿ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ತಕ್ಷಣ ವಾಪಸ್‍ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ

Update: 2021-11-20 19:02 IST

ಬೆಂಗಳೂರು, ನ. 20: `ಕರಾಳ ಕೃಷಿ ಕಾಯ್ದೆಗಳನ್ನು ಪ್ರಧಾನಿ ಮೋದಿ ಸರಕಾರ ವಾಪಸು ಪಡೆದಂತೆ ರಾಜ್ಯ ಬಿಜೆಪಿ ಸರಕಾರವೂ ರೈತ ವಿರೋಧಿಯಾಗಿರುವ ಎಪಿಎಂಸಿ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ ಮತ್ತು ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆಯನ್ನು ತಕ್ಷಣ ವಾಪಾಸು ಪಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಶನಿವಾರ ಮಾಧ್ಯಮ ಪ್ರಕಟಣೆ ನೀಡಿರುವ ಅವರು, `ಕರಾಳ ಕೃಷಿ ಕಾಯ್ದೆಗಳನ್ನು ರೈತರ ಮೇಲೆ ಹೇರಿದ ಮೋದಿ ಸರಕಾರದ ಅಪರಾಧದಲ್ಲಿ ರಾಜ್ಯ ಬಿಜೆಪಿ ಸರಕಾರದ ಸಮಾನ ಪಾಲಿದೆ. ಮೋದಿ ಅವರು ಕೊಂದ ಪಾಪವನ್ನು ತಿಂದು ಪರಿಹರಿಸಿಕೊಂಡರು, ಈಗ ರಾಜ್ಯ ಬಿಜೆಪಿ ಸರಕಾರದ ಸರದಿ. ಎಪಿಎಂಸಿಗಳ ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ವ್ಯಾಪಾರ ನಡೆಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಬಂದಿರುವ ಖಾಸಗಿ ಕಂಪೆನಿಗಳಿಗೆ ಹೆಬ್ಬಾಗಿಲು ತೆರೆಯುವುದೇ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆಯ ದುರುದ್ದೇಶವಾಗಿದೆ' ಎಂದು ದೂರಿದ್ದಾರೆ.

`ಎಪಿಎಂಸಿಯ ಹೊಸ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರ ರಾಜ್ಯ ಸರಕಾರಕ್ಕೆ ಎಂಪಿಎಂಸಿಯಿಂದ ಹೊರಗಿರುವ ವರ್ತಕರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಅವರ ವ್ಯವಹಾರದ ಮೇಲೆ ನಿಗಾ ಇಡುವಂತಿಲ್ಲ, ಶುಲ್ಕ, ಸೆಸ್, ಲೆವಿ ಸಂಗ್ರಹಿಸುವಂತಿಲ್ಲ. ಇದು ಸರಕಾರದ ಸಂಪೂರ್ಣ ಶರಣಾಗತಿ. ಪ್ರಸ್ತುತ ಶೇ.6ರಷ್ಟು ರೈತರು ಎಪಿಎಂಸಿಗಳಲ್ಲಿ ಬೆಳೆ ಮಾರಾಟ ಮಾಡುತ್ತಿದ್ದು ಶೇ.94ರಷ್ಟು ರೈತರಿಗೆ ಮಾರುಕಟ್ಟೆ ಸೌಲಭ್ಯಗಳಿಲ್ಲ. ರೈತರಿಗೆ ನೆರವಾಗುವ ಉದ್ದೇಶ ಸರಕಾರಕ್ಕಿದ್ದರೆ ಮಾರುಕಟ್ಟೆಗಳಿಲ್ಲದ ಕಡೆಗಳಲ್ಲಿ ಎಪಿಎಂಸಿಯಿಂದ ಪರವಾನಿಗೆ ಪಡೆದು ಮಾರುಕಟ್ಟೆಗಳನ್ನು ಸ್ಥಾಪಿಸಲು ಸರಕಾರ ಉತ್ತೇಜನ ನೀಡಬಹುದಾಗಿದೆ' ಎಂದು ಅವರು ಸಲಹೆ ನೀಡಿದ್ದಾರೆ.

`ರೈತರ ಭೂಮಿಗಿದ್ದ ರಕ್ಷಣೆಯನ್ನು ಕಿತ್ತು ಹಾಕಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಭೂಗಳ್ಳರಿಗೆ ನೆರವಾಗುವ ದುರುದ್ದೇಶದ್ದು. ನಮ್ಮ ವಿರೋಧವನ್ನು ಧಿಕ್ಕರಿಸಿ ರಾಜ್ಯ ಸರಕಾರ ಅನುಷ್ಠಾನಗೊಳಿಸಲು ಹೊರಟಿದೆ. ಕೇಂದ್ರ ಸರಕಾರದಂತೆ ರಾಜ್ಯ ಸರಕಾರವೂ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು. ಕೃಷಿ ಭೂಮಿ ಖರೀದಿಗೆ ಇದ್ದ 25 ಲಕ್ಷ ರೂ.ಆದಾಯದ ಮಿತಿಯನ್ನು ರದ್ದುಗೊಳಿಸಿ, ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲು, ಭೂ ಸುಧಾರಣಾ ಕಾಯ್ದೆ 1961ರ ಸಕ್ಷನ್ 80 ಮತ್ತು 79 ಎ, ಬಿ, ಸಿ ಗಳನ್ನು ರದ್ದು ಮಾಡಿರುವ ಬಿಜೆಪಿ ಸರಕಾರ, ರೈತರನ್ನು ಬೀದಿಪಾಲು ಮಾಡಲು ಹೊರಟಿದೆ. ಭೂ ಸುಧಾರಣಾ ಕಾಯ್ದೆ 1961ರ ಸೆಕ್ಷನ್ 79, ಅ ಯಡಿಯಲ್ಲಿ ಸುಮಾರು 1.7 ಲಕ್ಷ ಎಕರೆ ಜಮೀನಿಗೆ ಸಂಬಂಧಿಸಿದ 13,814 ಪ್ರಕರಣಗಳು ದಾಖಲಾಗಿತ್ತು. ಭೂ ಸುಧಾರಣೆ ತಿದ್ದುಪಡಿ ಮಸೂದೆಯಿಂದ ಈ ಪ್ರಕರಣಗಳು ರದ್ದಾಗಿ ಸರಕಾರದ ಖಜಾನೆಗೆ ಸಾವಿರಾರು ಕೋಟಿ ರೂ.ನಷ್ಟವಾಗಲಿದೆ. ಸದನದ ಒಳಗೆ ಮತ್ತು ಹೊರಗೆ ಈ ಎರಡು ಕರಾಳ ಕಾಯ್ದೆಗಳನ್ನು  ಕಾಂಗ್ರೆಸ್ ಪಕ್ಷ ವಿರೋಧಿಸಿದೆ. ಇಂತಹ ಕಾಯ್ದೆಗಳನ್ನು ರೂಪಿಸುವ ಹಂತದಲ್ಲಿ ರೈತ ನಾಯಕರು ಮತ್ತು ವಿರೋಧಪಕ್ಷಗಳ ಜೊತೆ ಚರ್ಚೆ ನಡೆಸುವುದು ಪ್ರಜಾಪ್ರಭುತ್ವದ ನಡವಳಿಕೆ' ಎಂದು ಅವರು ತಿಳಿಸಿದ್ದಾರೆ.

`ಬಿಜೆಪಿ ಸರಕಾರ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದೆ. ಎಪಿಎಂಸಿ(ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಾಪಸು ಪಡೆಯಲು ರಾಜ್ಯ ಕಾಂಗ್ರೆಸ್ ಪಕ್ಷ ಹೋರಾಟ ನಡೆಸುವುದರ ಜೊತೆಗೆ ರಾಜ್ಯದ ರೈತ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಹೋರಾಟಕ್ಕೂ ಬೆಂಬಲ ನೀಡಲಿದೆ' ಎಂದು ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News