ಹೆಚ್ಚು ಬಿಜೆಪಿ ಸದಸ್ಯರನ್ನು ಗೆಲ್ಲಿಸಿದರೆ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಗೌರವಧನ ಹೆಚ್ಚಳ: ಸಚಿವ ಈಶ್ವರಪ್ಪ

Update: 2021-11-20 15:02 GMT

ಮೈಸೂರು,ನ.20: ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆಗಳಲ್ಲಿ ವಿಧಾನಪರಿಷತ್ ಗೆ ಅತೀ ಹೆಚ್ಚು ಬಿಜೆಪಿ ಸದಸ್ಯರುಗಳನ್ನು ಆಯ್ಕೆಮಾಡಿದರೆ ಗ್ರಾ.ಪಂ.ಅಧ್ಯಕ್ಷರಿಗೆ 5 ಸಾವಿರ, ಉಪಾಧ್ಯಕ್ಷರಿಗೆ 4ಸಾವಿರ ಮತ್ತು ಸದಸ್ಯರುಗಳಿಗೆ 2 ಸಾವಿರ ಗೌರವಧನ ಹೆಚ್ಚಳ ಮಾಡುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಘೋಷಣೆ ಮಾಡಿದರು.

ನಗರದ ವಸ್ತುಪ್ರದರ್ಶ ಆವರಣದಲ್ಲಿ ಶನಿವಾರ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿದ್ದ ಜನಸ್ವರಾಜ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಚುನಾವಣೆ ಘೋಷಣೆಯಾಗಿದ್ದರೂ ಪರವಾಗಿಲ್ಲ* ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳ ಗೌರವಧನವನ್ನು ಹೆಚ್ಚಳ ಮಾಡುತ್ತೇವೆ. ಈ ಹಿಂದೆ ಕಾಂಗ್ರೆಸ್ ನವರು ಗ್ರಾ.ಪಂ ಅಧ್ಯಕ್ಷರಿಗೆ ಬರೀ 3 ಸಾವಿರ ರೂ. ಉಪಾಧ್ಯಕ್ಷರಿಗೆ 2 ಸಾವಿರ ಮತ್ತು ಸದಸ್ಯರಿಗೆ ಬರೀ 1ಸಾವಿರ ಮಾತ್ರ ನೀಡುತ್ತಿದ್ದರು. ಹಾಗಾಗಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಹೆಚ್ವಿನ ಸಂಖ್ಯೆಯಲ್ಲಿ ಗೆಲ್ಲಿಸಿದರೆ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳ ಗೌರವಧನ ಹೆಚ್ಚಳ ಮಾಡಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ದೇಶದಲ್ಲೇ ನೆಗೆದು ಬಿದ್ದಿದೆ. ಯಾವ ಚುನಾವಣೆ ಬಂದರೂ ಹೆಸರು ಹೇಳಿಕೊಳ್ಳಲಾಗದೆ ಸೋಲುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನ ಪಡೆಯುತ್ತದೆ ಎಂದು  ಮೋದಿ ವಿರುದ್ಧ ಎದೆ ಎತ್ತಿ ಟೀಕಿಸುತ್ತಿದ್ದ  ಸಿದ್ಧರಾಮಯ್ಯ ಅವರಿಗೆ ಜನಪಾಠ ಕಲಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದವರ ಕಾಟ ತಾಳಲಾರದೆ  17 ಮಂದಿ ಕಾಂಗ್ರಸ್ ಶಾಸಕರುಗಳು ಬಿಜೆಪಿಗೆ ಬಂದರು. ಆಗ ನಡೆದ ಉಪಚುನಾವಣೆಯಲ್ಲೂ ಬಿಜೆಪಿ ಭರ್ಜರಿ ಜಯಗಳಿಸಿತು. ಇನ್ನೂ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲೂ ಬಿಜೆಪಿ ಗೆದ್ದಿದೆ. ಹಾನಗಲ್ ಉಪ ಚುನಾವಣೆಯೊಂದರಲ್ಲಿ ಕಾಂಗ್ರೆಸ್ ಗೆದ್ದಿರುವುದಕ್ಕೆ ಸಿದ್ದರಾಮಯ್ಯ ಬೀಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈಗಿರುವ ಕಾಂಗ್ರಸ್ ಪಕ್ಷ ರಾಷ್ಟ್ರೀಯ ಕಾಂಗ್ರಸ್ ಅಲ್ಲ, ದೇವೇಗೌಡರ ತರ ಇರುವ ಪ್ರಾದೇಶಿಕ ಪಕ್ಷ ನಮ್ಮ ರಾಜ್ಯದಲ್ಲಿ ಸ್ವಲ್ಪ ಬಿಟ್ಟರೆ ಬೇರೆ ಕಡೆ ಇದರಹೆಸರೇ ಇಲ್ಲ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಎಲ್ಲಿರುತ್ತಾರೊ ಅಲ್ಲಿ ಗುಂಪುಗಾರಿಕೆ ಇರುತ್ತದೆ. ಹಾಗಾಗಿ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಇದೆ. ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ ಮುಖ್ಯಮಂತ್ರಿಗಾಗಿ ಕಚ್ಚಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಟಿ.ಸೋಮಶೇಖರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಡಿ.ವಿ.ಸದಾನಂದಗೌಡ, ವಿಧಾನ ಪರಿಷತ್ ಅಭ್ಯರ್ಥಿ ರಘು ಕೌಟಿಲ್ಯ, ಶಾಸಕರುಗಳಾದ ಎಸ್.ಎ.ರಾಮದಾಸ್, ಅಶ್ವತ್ಥನಾರಾಯಣ, ಎಲ್.ನಾಗೇಂದ್ರ, ಹರ್ಷವರ್ಧನ್, ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ, ಜಿಲ್ಲಾ ಬಿಜೆಪಿ ಅಧ್ಯಕ್ಷೆ ಮಂಗಳಾ ಸೋಮಶೇಖರ್, ನಿಗಮ ಮಂಡಳಿ ಅಧ್ಯಕ್ಷರುಗಳಾದ ಎಸ್.ಮಹದೇವಯ್ಯ, ಅಪ್ಪಣ್ಣ, ವಿ.ಫಣೀಶ್, ಎನ್.ಆರ್.ಕೃಷ್ಣಪ್ಪಗೌಡ, ಕಾ.ಪು.ಸಿದ್ಬಿದಲಿಂಗಸ್ವಾಮಿ, ಬಿಜೆಪಿ ಮುಖಂಡರುಗಳಾದ ಪ್ರೊ.ಮಲ್ಲಿಕಾರ್ಜುನಪ್ಪ, ದೇವನೂರು ಜಿ.ಪ್ರತಾಪ್, ರಮೇಶ್, ಸಿ.ಬಸವೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News