ಕಸಾಪ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರವಿವಾರ ಮತದಾನ

Update: 2021-11-20 18:39 GMT

ಬೆಂಗಳೂರು, ನ. 20: ಕನ್ನಡದ ಪ್ರಾತಿನಿಧಿಕ ಸಂಸ್ಥೆ `ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಚುನಾವಣೆ ಹಿನ್ನೆಲೆಯಲ್ಲಿ ರವಿವಾರ(ನ.21) ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಆಯಾ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಮತದಾನ ನಡೆಯಲಿದೆ.

ಕಸಾಪ ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು, ಮುಕ್ತ ಮತ್ತು ನ್ಯಾಯಸಮ್ಮುತ ಮತದಾನಕ್ಕೆ ಚುನಾವಣಾ ಆಯೋಗ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಬೆಂಗಳೂರು ನಗರದ 42 ಮತಗಟ್ಟೆಗಳು ಸೇರಿ ರಾಜ್ಯಾದ್ಯಂತ ಒಟ್ಟು 420 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಬೆಂಗಳೂರಿನ 28 ಕ್ಷೇತ್ರಗಳಿಗೆ 42 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಎಲ್ಲ ತಾಲೂಕು ಕಚೇರಿಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚು ಮತದಾರರಿರುವ ಕ್ಷೇತ್ರಗಳಲ್ಲಿ ಎರಡೆರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಎಲ್ಲಿ ಮತ ಚಲಾಯಿಸಬೇಕು ಎಂಬುದನ್ನು ಈಗಾಗಲೇ ಮತದಾರರಿಗೆ ಕಸಾಪ ಮೂಲಕ ಮಾಹಿತಿ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ.

ಈ ಬಾರಿ ಒಟ್ಟು 3,10,109 ಮತದಾರರು ಮತದಾನದ ಅರ್ಹತೆ ಪಡೆದಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಯಾದಗಿರಿ ಜಿಲ್ಲಾಘಟಕ, ತಮಿಳುನಾಡು ಗಡಿನಾಡು ಘಟಕದ ಅಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವರು ಅವಿರೋಧ ಆಯ್ಕೆಯಾಗಿದ್ದಾರೆ. ಗೋವಾ ಗಡಿನಾಡು ಘಟಕಕ್ಕೆ ಯಾವ ಅಭ್ಯರ್ಥಿಯೂ ಸ್ಪರ್ಧಿಸಿಲ್ಲ. ಕೇರಳ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಗಡಿನಾಡು ಘಟಕದ ಚುನಾವಣೆ ನಡೆಯಲಿದೆ. ಹೊರನಾಡು ಹಾಗೂ ಹೊರದೇಶದ ಮತದಾರರಿಗೆ ಅಂಚೆ ಮೂಲಕ ಮತಗಳನ್ನು ರವಾನಿಸಲಾಗಿದ್ದು, ಈಗಾಗಲೇ ಕೆಲವರು ಮತಪತ್ರಗಳನ್ನು  ಕಸಾಪಕ್ಕೆ ಕಳುಹಿಸಿದ್ದಾರೆ. ನ.23ರ ಬೆಳಗ್ಗೆ 11 ಗಂಟೆಯೊಳಗೆ ಕೇಂದ್ರ ಚುನಾವಣಾಧಿಕಾರಿಗಳಿಗೆ ತಲುಪುವ ಮತಗಳನ್ನು ಪರಿಗಣಿಸಲಾಗುವುದು.

ಮತಪತ್ರದಲ್ಲಿ ಈ ಬಾರಿ ಕ್ರಮ ಸಂಖ್ಯೆ ನಮೂದಿಸಿಲ್ಲ. ಅಭ್ಯರ್ಥಿಗಳ ಫೋಟೋ ಹಾಗೂ ಅದರ ಮುಂದೆ ಅವರ ಹೆಸರನ್ನು ನಮೂದಿಸಲಾಗಿದೆ. ಪ್ರತಿ ಬಾರಿ ಕ್ರಮ ಸಂಖ್ಯೆ, ಫೋಟೋ ಮತ್ತು ಹೆಸರನ್ನು ನಮೂದಿಸಲಾಗುತ್ತಿತ್ತು. ಈ ಬಾರಿ ಕ್ರಮಸಂಖ್ಯೆ ಇಲ್ಲ. ಅಭ್ಯರ್ಥಿಗಳ ಫೋಟೋ ಇರುವ ಹೆಸರಿನ ಮುಂದೆ ಮತದಾರರು ಮತ ಚಲಾಯಿಸಬೇಕು. ಮತಗಟ್ಟೆಗಳ ವಿವರ ಪಡೆಯಲು ಮತದಾರರಿಗೆ ಅನುಕೂಲವಾಗುವಂತೆ ಆಯೋಗ ಇಟeಛಿಣioಟಿ ಞಚಿsಚಿಠಿಚಿ ಎಂಬ ಮೊಬೈಲ್ ಆ್ಯಪ್ ಸಿದ್ಧಪಡಿಸಿದೆ. ಆ್ಯಪ್ ಮೂಲಕ ಮತದಾರರು ವಿವರಗಳನ್ನು ಪಡೆದು ಮತಗಟ್ಟೆಗೆ ತೆರಳಿ ಮತದಾನ ಮಾಡಬಹುದಾಗಿದೆ.

ಮತದಾನ ಮಾಡಲು ಮತದಾರರು ಕಸಾಪ ನೀಡಿದ ಗುರುತಿನ ಪತ್ರ ಅಥವಾ ಮತದಾರರ ಗುರುತಿನ ಚೀಟಿ, ಆಧಾರ್ ಸೇರಿದಂತೆ ಇನ್ನಾವುದೇ ಗುರುತಿನ ಚೀಟಿಯೊಂದಿಗೆ ತೆರಳಿ ಮತದಾನ ಮಾಡಬಹುದು. ನಾಳೆಯೇ ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರ ಫಲಿತಾಂಶ ಪ್ರಕಟವಾಗಲಿದೆ. ನ.24ರಂದು ಕಸಾಪ ರಾಜ್ಯಾಧ್ಯಕ್ಷರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News