ಊರಿನಲ್ಲಿ ಕಾಲೇಜು ಆರಂಭಿಸುವ ಕನಸಿದೆ: ಹರೇಕಳ ಹಾಜಬ್ಬ

Update: 2021-11-20 16:49 GMT

ಬೆಂಗಳೂರು, ನ.20: ಬಡಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಊರಿನಲ್ಲಿಯೇ ಪಬ್ಲಿಕ್ ಶಾಲೆ ಮತ್ತು ಪಿಯು ಕಾಲೇಜು ಆರಂಭಿಸುವ ಕನಸು ಇದೆ ಎಂದು ಪದ್ಮಶ್ರೀ ಪುರಸ್ಕೃತ, ಸಮಾಜ ಸೇವಕ ಹರೇಕಳ ಹಾಜಬ್ಬ ನುಡಿದರು.

ಶನಿವಾರ ನಗರದ ಕನ್ನಡ ಭವನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ 217ನೆ ತಿಂಗಳ ಅತಿಥಿಯಾಗಿ ಪಾಲ್ಗೊಂಡು ತಾವು ಸಾಗಿ ಬಂದ ಹಾದಿಯನ್ನು ಮೆಲಕು ಹಾಕಿದರು.

ಊರಿನಲ್ಲಿಯೇ ಬಡಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು.ಇದಕ್ಕಾಗಿ ಪಬ್ಲಿಕ್ ಶಾಲೆ ಮತ್ತು ಪಿಯು ಕಾಲೇಜು ಆರಂಭಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರಕಾರ ಹೆಜ್ಜೆಯಿರಿಸಲಿ ಎಂದು ಹೇಳಿದರು.

ಕಿತ್ತಲೆ ಹಣ್ಣು ಮಾರಾಟ ಮಾಡಿ ದಿನಕಳೆಯುತ್ತಿದ್ದ ನನ್ನನು ಗಡಿಮೀರಿ ಜನರು ಪ್ರೀತಿ ತೋರಿಸುತ್ತಿದ್ದಾರೆ.ಬಡತನದ ಜೀವನ ನನ್ನನ್ನು ಪದ್ಮಶ್ರೀ ವರೆಗೂ ಕೊಂಡೊಯ್ದಿದೆ. ಇದಕ್ಕಿಂತ ಇನ್ನೇನು ನನಗೆಬೇಕು ಎಂದು ಅವರು ತಿಳಿಸಿದರು. 

ಕಿತ್ತಲೆ ಹಣ್ಣು ಮಾರಿ ದಿನಕ್ಕೆ 300 ರೂ. ಸಂಪಾದಿಸುತ್ತಿದ್ದ ನನ್ನನ್ನು  ಕೇಂದ್ರ ಸರಕಾರ 20 ಸಾವಿರ ರೂ.ಒಂದು ದಿನಕ್ಕೆ ಖರ್ಚು ಮಾಡಿ ಭವ್ಯ ಹೋಟೆಲ್ ನಲ್ಲಿ ಇರಿಸಿತು.ಇದನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದ ಅವರು, ಅಕ್ಷರದ ಅರಿವಿಲ್ಲದ ಮುಜಗರದ ಬದುಕು ನನ್ನೂರಿನಲ್ಲಿ ನಾನು ಶಾಲೆ ತೆರೆಯುವಂತೆ ಮಾಡಿತು.ನನ್ನೂರ ನೂರಾರು ಬಡ ಮಕ್ಕಳ ಬದುಕಿಗೆ ಅದು ಅರಿವಿನ ಬೆಳಕಾಗಿತು ಎಂದು ತಿಳಿಸಿದರು.

ಬಡಮಕ್ಕಳಿಗಾಗಿ ಶಾಲೆ ನಿರ್ಮಿಸಬೇಕು ಎಂದಾಗ ಹಲವಾರು ಅಡೆತಡೆಗಳು ಉಂಟಾದವು. ಆ ವೇಳೆ ಶಾಸಕರಾಗಿದ್ದ ಯು.ಟಿ.ಫರೀದ್ ಅವರ ತೋರಿಸಿದ ಸಹಾಯವನ್ನು ಮರೆಯಲು ಸಾಧ್ಯವೇ ಇಲ್ಲ. ಈಗಾಗಲೇ ನಮ್ಮೂರ ಶಾಲೆಯಲ್ಲಿ ಕಲಿತ ಮಕ್ಕಳು ಇಂಜಿನಿಯರಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ನಮ್ಮೂರ ಶಾಲೆಯಲ್ಲಿ ಓದಿದ್ದಾರೆ ಎಂದಾಗ ಖುಷಿಯಾಗುತ್ತದೆ ಎಂದು ಹಾಜಬ್ಬ ನುಡಿದರು.

ಅಕ್ಷರ ಜ್ಞಾನವಿಲ್ಲದ ನನ್ನ ಬದುಕು ಈಗ ಕುವೆಂಪು ವಿವಿಯ ಬಿ.ಕಾಂ.ತರಗತಿಯ ಪಠ್ಯವಾಗಿದೆ. ಕೇರಳ ಶಾಲೆಯ ಪಠ್ಯದಲ್ಲಿ ನನ್ನ ಜೀವನ ಸಾಧನೆ ಕುರಿತು ಬಂದಿದೆ.ಇದಕ್ಕಿಂತ ಖುಷಿ ಇನ್ನೇನು ಬೇಕು.ನಾನೇನು ಹೇಳುಕೊಳ್ಳುವಷ್ಟು  ಸಾಧನೆ ಮಾಡಿಲ್ಲ.ಅದರೂ ಗಡಿ ಮೀರಿ ಜನರು ಪ್ರೀತಿ ತೋರಿ ಸನ್ಮಾನಿಸುತ್ತಿರುವುದಕ್ಕೆ ಚಿರಋಣಿಯಾಗಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ನಮ್ಮಪ್ಪ ಕೂಡ ಬಡನತನದಲ್ಲೇ ಬದುಕು ಸವೆಸಿದ.ಮಳೆಯಿಂದಾಗಿ ಮನೆ ಬಿದ್ದು ಹೋದಾಗ ಬೇರೆಯವರ ಮನೆಯಲ್ಲಿದ್ದೇ ಬದುಕು ಕಳೆದೆವು.ನನ್ನ ಹೋರಾಟದ ಜೀವನ ದುಃಖದಿಂದ ಕೂಡಿದೆ. ಆ ಜೀವನವೇ ಪದ್ಮಶ್ರೀ ಪ್ರಶಸ್ತಿ ವರೆಗೂ ತಂದಿಟ್ಟಿದೆ.

-ಹಾಜಬ್ಬ, ಪದ್ಮಶ್ರೀ ಪುರಸ್ಕೃತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News