ಜನರ ಆಕ್ರೋಶಕ್ಕೆ ಮಣಿಯದ ಸರಕಾರಗಳೇ ಇಲ್ಲ: ಸಿದ್ದರಾಮಯ್ಯ

Update: 2021-11-21 12:27 GMT

ತುಮಕೂರು.ನ.21: ರೈತರ ಹೋರಾಟಕ್ಕೆ ಐತಿಹಾಸಿಕ ಜಯ ಸಿಕ್ಕಿದೆ. ಜನರ ಆಕ್ರೋಶಕ್ಕೆ ಮಣಿಯದ ಸರಕಾರಗಳೇ ಇಲ್ಲ, ದೇಶದಲ್ಲಿ ಇರುವುದು ಪ್ರಜಾಪ್ರಭುತ್ವ, ಜನಶಕ್ತಿಯ ಮುಂದೆ ರಾಜ್ಯಶಕ್ತಿ ಏನು ಮಾಡಲು ಸಾಧ್ಯವಿಲ್ಲ ಎಂಬುದು ಈ ಹೋರಾಟ ಸಾಬೀತು ಪಡಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ದೇಶದ ಇತಿಹಾಸದಲ್ಲಿ ನೂರು ಪಟ್ಟು ಬೆಲೆ ಏರಿಕೆ ಆಗಿರುವುದು ಇದೇ ಮೊದಲು, ಬಿಜೆಪಿಗರು ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳವಾದಾಗ ಬೀದಿಗೆ ಇಳಿಯುತ್ತಿದ್ದರು, ಈಗ ಅವರಿಗೆ ನಾಚಿಕೆಯಾಗುವುದಿಲ್ಲ,ಈಗ ಅವರೆಲ್ಲ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ನಗರದ ಗಾಜಿನಮನೆಯಲ್ಲಿ ನಡೆದ ಕಾಂಗ್ರೆಸ್ ಜನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಬಡವರ ಸಮಸ್ಯೆಗೆ ಮಾತನಾಡಿದವರಿಗೆ ದೇಶದ್ರೋಹಿ ಹಣೆಪಟ್ಟಿ ಕಟ್ಟಲಾಗುತ್ತಿದೆ.ಅಭಿವ್ಯಕ್ಯಿ ಸ್ವಾತಂತ್ರ್ಯ ಇಲ್ಲ, ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆ, ದೇಶದಲ್ಲಿ ಇರುವುದು ಅಘೋಷಿತ ತುರ್ತು ಪರಿಸ್ಥಿತಿ ಎಂದರು.

ಕಳೆದ ಏಳು ವರ್ಷದಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡು ಕಾರ್ಪೋರೆಟ್ ಪರ ನಿಲುವಿನಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದ್ದು, ಇಂತಹ ಸರಕಾರವನ್ನು ಜನರು ಕಿತ್ತೊಗೆಯಬೇಕೆಂದು ಎಂದು ಕರೆ ನೀಡಿದ್ದಾರೆ .

ಸ್ವಾತಂತ್ರ್ಯ ಹೋರಾಟವನ್ನು ಬಿಟ್ಟರೆ ನಡೆದಿರುವ ಸುಧೀರ್ಘ ರೈತ ಹೋರಾಟ ಇದಾಗಿದೆ, ಮೋದಿ ಅವರಿಗೆ ಈಗ ಜ್ಞಾನೋದಯವಾಗಿದೆ. 700 ರೈತರು ಸಾವನ್ನಪ್ಪಿದ ಮೇಲೆ ವಾಪಾಸ್ ಪಡೆಯಲು ಮುಂದಾಗಿದ್ದಾರೆ, ರೈತರ ಸಾವಿನ ಹೊಣೆ ಮೋದಿ ಅವರ ಸರಕಾರದ್ದು.ಪ್ರತಿ ಮೃತ ರೈತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ನೀಡಬೇಕು ಹಾಗೂ ರೈತ ಹೋರಾಟಗಾರರ ಮೇಲೆ ಹಾಕಿರುವ ಎಲ್ಲಾ ಕೇಸುಗಳನ್ನು ಬೇಷರತ್ ವಾಪಸ್ ಪಡೆಯಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು.

ಅಧಿಕಾರ ವಿಕೇಂದ್ರೀಕರಣದ ಮೇಲೆ ನಂಬಿಕೆ ಇಲ್ಲದ ಬಿಜೆಪಿ ಜನಸ್ವರಾಜ್ ಯಾತ್ರೆ ಮಾಡುತ್ತಿದೆ. ಬಿಜೆಪಿಗರು ಲಜ್ಜೆಗೆಟ್ಟವರು, ಅಧಿಕಾರ ವಿಕೇಂದ್ರೀಕರಣ ಜಾರಿಗೆ ಬದ್ಧವಾಗಿರುವುದು ಕಾಂಗ್ರೆಸ್ ಮಾತ್ರ.ಗ್ರಾಮ ಸ್ವರಾಜ್‍ಗೆ ವಿರುದ್ದವಾಗಿದ್ದ ಬಿಜೆಪಿ ಜನಸ್ವರಾಜ್ ಹೆಸರಿನಲ್ಲಿ ಮತ ಕೇಳುತ್ತಿದೆ. ಇವರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ,ಗ್ರಾಮಕ್ಕೆ ಅಧಿಕಾರ ಮತ್ತು ಅನುದಾನ ಕೊಟ್ಟಿದ್ದು ಕಾಂಗ್ರೆಸ್,ನರೇಗಾ ಯೋಜನೆ ತಂದಿದ್ದು ಮನಮೋಹನ್ ಸಿಂಗ್ ಹೊರತು ನರೇಂದ್ರ ಮೋದಿ ಅಲ್ಲ, ವೋಟು ಕೊಟ್ರೆ ಗ್ರ್ಯಾಂಟು ಕೊಡ್ತೀವಿ ಅನ್ನುವವರಿಗೆ ಬುದ್ಧಿ ಇದೆಯೇ?,ಕಳೆದ ಬಾರಿ 13 ಸ್ಥಾನಗಳನ್ನು ಗೆದಿದ್ದ ಕಾಂಗ್ರೆಸ್ ಈ ಬಾರಿ 15ಕ್ಕು ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ತುಮಕೂರಿನಲ್ಲಿ ಆರ್.ರಾಜೇಂದ್ರ ಅವರನ್ನು ನಿವೆಲ್ಲರೂ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಮಳೆಯಿಂದ ಒಂದು ಲಕ್ಷ ಹೆಕ್ಟೇರ್‍ನಲ್ಲಿ ಬೆಳೆ ನಾಶವಾಗಿದೆ, ಮುಖ್ಯಮಂತ್ರಿಗಳು ಚಲನಚಿತ್ರ ಬಿಡುಗಡೆ ಮಾಡಲು ನಿರತರಾಗಿದ್ದಾರೆ,ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವಾನ ಹೇಳುವ ಕೆಲಸವನ್ನು ಮಾಡಲಿಲ್ಲ,ಕೈಮುಗಿದು ಕೇಳಿಕೊಳ್ಳುತ್ತೇನೆ ಬಿಜೆಪಿ ಗೆಲ್ಲಿಸಬೇಡಿ.ಮೋದಿ ಹೆಸರಿನಲ್ಲೆ ಇನ್ನು ಬಿಜೆಪಿಗರು ಬದುಕುತ್ತಿದ್ದಾರೆ,ಮೋದಿ ಕಾಂಗ್ರೆಸ್ ಅನ್ನು 10 ಶೇ. ಸರಕಾರ ಎಂದಿದ್ದರು,ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ರಾಜ್ಯದಲ್ಲಿ ಶೇ.40ರಷ್ಟು ಕಮೀಷನ್ ಕೊಡಬೇ ಕಾಗಿರುವ ಬಗ್ಗೆ ಪತ್ರ ಬರೆದಿದ್ದಾರೆ,ಬೊಮ್ಮಾಯಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು,ಇಷ್ಟೆಲ್ಲ ಭ್ರಷ್ಟಾಚಾರ ಮಾಡುತ್ತಿರುವ ಸರಕಾರ ಅಧಿಕಾರದಲ್ಲಿ ಇರಬೇಕೇ,ಬೇಡವೆ ಎಂಬುದನ್ನು ಜನತೆ ತೀರ್ಮಾನಿಸ ಬೇಕೆಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಟೌನ್‍ಹಾಲ್ ವೃತ್ತದಿಂದ ಗಾಜಿನ ಮನೆಯವರೆಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಾದಯಾತ್ರೆ ನಡೆಸಿದರು.ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಟಿ.ಬಿ.ಜಯಚಂದ್ರ,ಮಾಜಿ ಶಾಸಕ ಕೆ.ಎನ್.ರಾಜಣ್ಣ,ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ,ಶಾಸಕರಾದ ವೆಂಕಟರಮಣಪ್ಪ, ಡಾ.ರಂಗನಾಥ್, ಮಾಜಿ ಶಾಸಕರಾದ ಷಡಕ್ಷರಿ, ಶಫೀ ಅಹ್ಮದ್,ಡಾ.ರಫೀಕ್ ಅಹ್ಮದ್, ಸೋಮ್ಲಾನಾಯಕ್, ಲಕ್ಕಪ್ಪ, ರಾಜ್ಯ ಸಭಾ ಸದಸ್ಯ ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News