75 ವರ್ಷ ಕಾಂಗ್ರೆಸ್ ಆಡಳಿತ ಸಮುದ್ರದ ಉಪ್ಪು ನೀರಿನಂತಿತ್ತು: ಬಿ.ಎಸ್.ಯಡಿಯೂರಪ್ಪ

Update: 2021-11-21 12:12 GMT

ಬೆಂಗಳೂರು, ನ. 21: `ಬಿಜೆಪಿ, ಮೋದಿಯವರ ನಾಯಕತ್ವದಲ್ಲಿ ಎಲ್ಲರಿಗೂ ನೆಮ್ಮದಿಯ ಬದುಕನ್ನು ನೀಡಿದೆ. 75 ವರ್ಷ ಕಾಂಗ್ರೆಸ್ ಆಡಳಿತ ಸಮುದ್ರದ ಉಪ್ಪು ನೀರಿನಂತಿತ್ತು. ಕಾಂಗ್ರೆಸ್ ಪಕ್ಷದವರಿಗೆ ಮತ್ತೆ ಅವಕಾಶ ಕೊಡದಿರಿ. ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ವಿಸರ್ಜನೆಗೆ ಸಲಹೆ ನೀಡಿದ್ದರು. ಆದರೆ, ದೇಶದ ಜನರೇ ಈಗ ಕಾಂಗ್ರೆಸ್ಸನ್ನು ತಿರಸ್ಕರಿಸಿದ್ದಾರೆ' ಎಂದು  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.

ರವಿವಾರ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಪಕ್ಷದಿಂದ ಏರ್ಪಡಿಸಿದ್ದ `ಜನಸ್ವರಾಜ್ ಯಾತ್ರೆ'ನೇತೃತ್ವ ವಹಿಸಿ ಮಾತನಾಡಿದ ಅವರು, `ಎಲ್ಲ ಜನಾಂಗವನ್ನು ಸಮಾನವಾಗಿ ನೋಡಿದ ಪಕ್ಷ ಬಿಜೆಪಿ. ಮೋದಿ ಅವರ ಆಡಳಿತ, ರಾಜ್ಯದ ಬಿಜೆಪಿ ಸರಕಾರದ ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಗಮನಿಸಿ ಬಿಜೆಪಿಗೆ ಮತ ಕೊಡಬೇಕು. ಪ್ರತಿ ಮನೆಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅನೇಕ ಮಹತ್ವದ ಕಾರ್ಯಕ್ರಮಗಳು ಕೇಂದ್ರ-ರಾಜ್ಯ ಸರಕಾರದಿಂದ ಅನುಷ್ಠಾನಗೊಳ್ಳುತ್ತಿವೆ. ಎರಡೂ ಸರಕಾರಗಳು ರೈತಪರ, ಜನಪರವಾಗಿ ಕೆಲಸ ಮಾಡುತ್ತಿವೆ. ಪರಿಷತ್‍ನಲ್ಲಿ ನಿಶ್ಚಿತವಾಗಿ ನಾವು 15 ಸ್ಥಾನಗಳನ್ನು ಗೆಲ್ಲಲಿದ್ದೇವೆ' ಎಂದು ತಿಳಿಸಿದರು.

ಶಾಸಕ ಪಿ.ರಾಜೀವ್ ಮಾತನಾಡಿ, `ರಾಜ್ಯದ ಕಾಂಗ್ರೆಸ್‍ನದು ಖಾಲಿ ಡಬ್ಬದ ಸದ್ದು. ಬಿಟ್ ಕಾಯಿನ್ ಪ್ರಕರಣಕ್ಕೆ ಕಾಂಗ್ರೆಸ್ ಪಕ್ಷವೇ ನೀರು ಹಾಗೂ ಗೊಬ್ಬರ ಹಾಕಿ ಬೆಳೆಸಿದೆ. ಪಂಚಾಯತ್ ಸದಸ್ಯರ ಗೌರವ ಮತ್ತು ಆತ್ಮಾಭಿಮಾನವನ್ನು ಎತ್ತಿ ಹಿಡಿಯಲು ಬೇರೆ ಪಕ್ಷದವರು ಪ್ರಯತ್ನಿಸಲಿಲ್ಲ. ಆದರೆ, ಬಿಜೆಪಿ ಸದಸ್ಯರು ಮತ್ತು ಸರಕಾರವು ಪಂಚಾಯಿತಿ ಸದಸ್ಯರ ಗೌರವ ಮತ್ತು ಆತ್ಮಾಭಿಮಾನ ಎತ್ತಿ ಹಿಡಿಯುವ ಕೆಲಸ ಮಾಡಿದೆ' ಎಂದು ವಿವರಿಸಿದರು. 

ಮಹಾಂತೇಶ ಕವಟಗಿಮಠ ಅವರು ನೀರಾವರಿ, ಕ್ರೀಡಾಂಗಣ, ತ್ಯಾಜ್ಯದ ಸದುಪಯೋಗ, ಗ್ರಾಮ ಪಂಚಾಯತ್ ಗಳನ್ನು ಮೇಲ್ದರ್ಜೆಗೆ ಏರಿಸಿದ್ದು ಸೇರಿದಂತೆ ಈ ಭಾಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ವಿವರಿಸಿದರು. ಯಡಿಯೂರಪ್ಪ ಅವರು ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನಕ್ಕೆ ಹೆಚ್ಚಿಸಿದ್ದಾರೆ. ಇದನ್ನು ಗಮನಿಸಿ ಬಿಜೆಪಿಗೆ ಮತ ಕೊಡಲು ಅವರು ಮನವಿ ಮಾಡಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ, `ಜನಪರ ಹಾಗೂ ಜನರ ಅವಶ್ಯಕತೆಗಳನ್ನು ಗಮನಿಸದ ಕಾರಣ ಕಾಂಗ್ರೆಸ್ ಸೋತಿತು. ಕಾಂಗ್ರೆಸ್ ನಾಟಕ ಹಾಗೂ ದೊಂಬರಾಟಕ್ಕಷ್ಟೇ ಸೀಮಿತವಾಗಿದೆ. ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರು, ದಲಿತರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿತ್ತು ಎಂದು ವಿವರಿಸಿದರು. ಬಿಜೆಪಿ ದಲಿತರಿಗೆ ಹಾಗೂ ಅಲ್ಪಸಂಖ್ಯಾತರಿಗೆ ದೊಡ್ಡ ಸ್ಥಾನಗಳನ್ನು ನೀಡಿದೆ ಎಂದು ತಿಳಿಸಿದರು.

ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಬಿ.ಶ್ರೀರಾಮುಲು, ಶಾಸಕ ಮಹೇಶ್ ಕಮಠಳ್ಳಿ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ, ಶಾಸಕರಾದ ದುರ್ಯೋಧನ ಐಹೂಳೆ, ಶ್ರೀಮಂತ ಪಾಟೀಲ, ರಮೇಶ ಕತ್ತಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News