×
Ad

ಮದುವೆಯಾದರೂ ಪೊಕ್ಸೊ ಪ್ರಕರಣ ರದ್ದಾಗುವುದಿಲ್ಲ: ಹೈಕೋರ್ಟ್

Update: 2021-11-21 18:24 IST

ಬೆಂಗಳೂರು, ನ. 21: ಅತ್ಯಾಚಾರ ಎಸಗಿ ಮದುವೆಯಾದರೂ ಕೇಸ್ ರದ್ದಾಗುವುದಿಲ್ಲ. ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ದಾಖಲಾಗಿದ್ದ ಪೊಕ್ಸೊ ಪ್ರಕರಣವನ್ನು ಕೈಬಿಡಲು ಹೈಕೋರ್ಟ್ ನಿರಾಕರಿಸಿದೆ. 

ಪೊಕ್ಸೊ ಪ್ರಕರಣದಲ್ಲಿ ಸಂತ್ರಸ್ತೆಯನ್ನೇ ಮದುವೆಯಾಗಿದ್ದ ಆರೋಪಿ ವಿರುದ್ಧದ ಕೇಸ್ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದೆ. ಸಂತ್ರಸ್ತೆಯನ್ನು ಆರೋಪಿ ಮದುವೆಯಾಗಿದ್ದರೂ ಅತ್ಯಾಚಾರ ಪ್ರಕರಣ ರದ್ದಾಗುವುದಿಲ್ಲವೆಂದು ಸ್ಪಷ್ಟಪಡಿಸಿದೆ.

ವಿಜಯಪುರದ ಬಸವನಬಾಗೇವಾಡಿಯ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ಪೀಠ, ಪ್ರಕರಣದಲ್ಲಿ ಆರೋಪಿ ಮತ್ತು ಸಂತ್ರಸ್ಥೆ ರಾಜಿಯಾದ ಮಾತ್ರಕ್ಕೆ ಕೇಸ್ ರದ್ದು ಮಾಡಲು ಸಾಧ್ಯವಿಲ್ಲ, ಪ್ರಕರಣ ರದ್ದು ಮಾಡಿದರೆ ಸಮಾಜದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.

ಅಪ್ರಾಪ್ತೆಯನ್ನು ಪ್ರೀತಿಸಿದ್ದ ಆರೋಪಿ ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದು, ಅತ್ಯಾಚಾರ ಎಸಗಿದ್ದ, ಬಾಲಕಿ ಗರ್ಭಿಣಿಯಾದ ನಂತರ ಆಕೆಯನ್ನು ಅಪಹರಿಸಿದ್ದ, ಬಾಲಕಿಯ ಕುಟುಂಬದವರು ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೊಲ್ಲಾಪುರದಲ್ಲಿದ್ದ ಆತನನ್ನು ಬಂಧಿಸಿ ಅತ್ಯಾಚಾರ, ಅಪಹರಣ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. 

ಈ ಪ್ರಕರಣವನ್ನು ರದ್ದುಪಡಿಸಬೇಕೆಂದು ಅರೋಪಿ ಮತ್ತು ಸಂತ್ರಸ್ತೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮದುವೆಯಾಗಿ ಒಂದು ಮಗುವಿದೆ. ಈ ಪ್ರಕರಣ ರದ್ದುಪಡಿಸಿ ಇಬ್ಬರೂ ಒಟ್ಟಿಗೆ ಬಾಳಲು ಅವಕಾಶ ಕಲ್ಪಿಸಬೇಕೆಂದು ಅರ್ಜಿದಾರರ ಪರ ವಕೀಲರು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News