ಬೆಳಗಾವಿಯಲ್ಲಿ ಡಿ.13ರಿಂದ 24ರ ವರೆಗೆ ಅಧಿವೇಶನ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

Update: 2021-11-21 13:00 GMT

ಬೆಂಗಳೂರು, ನ. 21: ಕರ್ನಾಟಕ ರಾಜ್ಯದ 15ನೆ ವಿಧಾನಸಭೆಯ 11ನೆ ಅಧಿವೇಶನವನ್ನು ರಾಜ್ಯಪಾಲರ ಒಪ್ಪಿಗೆ ಮೇರೆಗೆ ಡಿ.13ರಿಂದ 24ರ ವರೆಗೆ ಒಟ್ಟು 10 ದಿನಗಳ ಕಾಲ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಸಮಾವೇಶಗೊಳ್ಳಲಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, `ಮೂರು ವರ್ಷಗಳ ಬಳಿಕ ಬೆಳಗಾವಿಯ ಸುವರ್ಣಸೌಧದಲ್ಲಿ 10 ದಿನಗಳ ಕಾಲ ಕಲಾಪ ನಡೆಸಲು ತೀರ್ಮಾನಿಸಲಾಗಿದೆ. ಡಿಸೆಂಬರ್ 13ರಂದು ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗಲಿದೆ. ಡಿ.18 ಮತ್ತು 19ರಂದು (ಶನಿವಾರ ಮತ್ತು ರವಿವಾರ) ರಜಾದಿನ ಹೊರತುಪಡಿಸಿ ಡಿ.24ರ ವರೆಗೆ ಕಲಾಪ ನಡೆಯಲಿದೆ ಎಂದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಬಾರಿಯ ಅಧಿವೇಶನ ಅತ್ಯಂತ ಮಹತ್ವದಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಹಲವು ಪ್ರಮುಖ ಮಸೂದೆಗಳು ಚರ್ಚೆಗೆ ಬರಲಿವೆ. ಎಪಿಎಂಸಿ, ಭೂ ಸುಧಾರಣೆ ತಿದ್ದುಪಡಿ ಮಸೂದೆಗಳನ್ನು ವಾಪಸ್ ಪಡೆಯಲು ಪಟ್ಟು ಹಿಡಿದಿರುವ ಪ್ರತಿಪಕ್ಷಗಳು, ಬಿಟ್ ಕಾಯಿನ್ ಹಗರಣ, ಅಕಾಲಿಕ ಮಳೆ-ಬೆಳೆ ನಷ್ಟ ಸಹಿತ ಆಡಳಿತಾರೂಢ ಬಿಜೆಪಿ ಸರಕಾರದ ವೈಫಲ್ಯಗಳನ್ನು ಪ್ರಸ್ತಾಪಿಸುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News