×
Ad

ಚಿಕ್ಕಬಳ್ಳಾಪುರ: ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಿಎಂ ಬೊಮ್ಮಾಯಿ

Update: 2021-11-21 18:50 IST

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ವ್ಯಾಪಕ‌ ಮಳೆಯಿಂದಾಗಿ ಒಟ್ಟು 24 ಮನೆಗಳು ಸಂಪೂರ್ಣ ಕುಸಿದು ಬಿದ್ದಿದ್ದು, 1, 078 ಮನೆಗಳು ಭಾಗಶಃ ಕುಸಿದಿವೆ. ಪೂರ್ತಿ ಕುಸಿದು ಬಿದ್ದ ಮನೆಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ  ನೀಡಲಾಗುವುದು  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ತಿಳಿಸಿದರು.

ಅವರು ಇಂದು ಚಿಕ್ಕಬಳ್ಳಾಪುರ ನಗರ ಮತ್ತು ಜಿಲ್ಲೆಯ ವಿವಿಧ ಮಳೆಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇತ್ತೀಚಿಗೆ ಸುರಿದ ವ್ಯಾಪಕ ಮಳೆಯಿಂದಾಗಿ ಹಲವು ಬೆಳೆಗಳು, ಮನೆಗಳಿಗೆ  ಹಾನಿಗೊಳಗಾಗಿ ಆರ್ಥಿಕ ನಷ್ಟವಾಗಿದೆ.  ನಷ್ಟವಾಗಿರುವ ಅಂದಾಜನ್ನು ಸಮೀಕ್ಷೆ ನಡೆಸಿ ಸಂಪೂರ್ಣ ಮತ್ತು ಸಮಗ್ರ  ವರದಿ ನೀಡುವಂತೆ ಆಯಾ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ.ಈಗಾಗಲೇ ಪ್ರಾಥಮಿಕ ವರದಿ ಲಭ್ಯವಾಗಿದ್ದು, ಒಟ್ಟಾರೆಯಾಗಿ ಆಗಿರುವ ನಷ್ಟದ ಸಮಗ್ರ ಮಾಹಿತಿ ಸಂಗ್ರಹ, ವಿಶ್ಲೇಷಣೆ ಕಾರ್ಯ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ಸಂಪೂರ್ಣ ಸ್ಪಷ್ಟತೆ ದೊರೆಯಲಿದೆ. ನಿಖರವಾದ ಮತ್ತು ಸ್ಪಷ್ಟವಾದ ವರದಿ ಬಂದ ನಂತರ ಯಾವ ಯಾವ ಜಿಲ್ಲೆಗಳಿಗೆ ಎಷ್ಟು  ಪರಿಹಾರ ನೀಡಬೇಕೆಂದು ನಿರ್ಧರಿಸಿ, ಆದ್ಯತೆ ಮೇಲೆ ಹಣ ಬಿಡುಗಡೆ ಮಾಡಿ ಮಳೆಬಾಧಿತ ಪ್ರದೇಶಗಳ ಜನರಿಗೆ ಸ್ಪಂದಿಸಲಾಗುವುದು. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಅಂತಹ ಮನೆಗಳಿಗೆ  ಕೂಡಲೇ 10 ಸಾವಿರ ರೂಪಾಯಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಪೂರ್ತಿಯಾಗಿ ಕುಸಿದ ಮನೆಗಳಿಗೆ ತಲಾ 5 ಲಕ್ಷ ಮತ್ತು ಭಾಗಶಃ ಕುಸಿದು ಬಿದ್ದ ಮನೆಗಳಿಗೆ ಹಾನಿಗನುಸಾರವಾಗಿ ಪರಿಹಾರ ನೀಡಲಾಗುವುದು. ಸ್ವಲ್ಪ ಹಾನಿ ಅಥವಾ ಧಕ್ಕೆಯಾದ ಮನೆಗಳಿಗೆ ಐವತ್ತು ಸಾವಿರ ನೀಡಲು ಅವಕಾಶವಿದೆ ಎಂದರು 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 24 ಮನೆಗಳು ಸಂಪೂರ್ಣ ಕುಸಿದಿವೆ. 1 078 ಮನೆಗಳು ಭಾಗಶಃ ಕುಸಿದಿವೆ. ಕಂದವಾರ ಕೆರೆಯಿಂದ ಅಮಾನಿ  ಗೋಪಾಲಕೃಷ್ಣ ಕೆರೆಯವರೆಗೂ ರಾಜಕಾಲುವೆ ನಿರ್ಮಾಣ ಮಾಡಬೇಕಾಗಿದ್ದು, ಕೂಡಲೇ ಸಮಗ್ರ ಯೋಜನಾ ವರದಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ.ವರದಿ ಬಂದ ಕೂಡಲೇ ಅಗತ್ಯ ಅನುಧಾನ  ಬಿಡುಗಡೆ  ಮಾಡಲಾಗುವುದು.ಆದ್ಯತೆಯ ಮೇಲೆ ಈ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಚುನಾವಣಾ ನೀತಿ ಜಾರಿಯಲ್ಲಿರುವುದರಿಂದ ಅತಿವೃಷ್ಠಿ ಪರಿಹಾರ ಕಾರ್ಯಗಳನ್ನು ವೇಗವಾಗಿ ಮಾಡಲು ತೊಡಕಾಗುತ್ತಿದೆ. ನೀತಿ ಸಂಹಿತೆ ಕಾರಣದಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಿಗೆ ಕೆಲಸ ಮಾಡಲು ಸಮಸ್ಯೆಯಾಗುತ್ತಿದ್ದು, ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿರುವ ಕಾರಣ ನೀತಿ ಸಂಹಿತೆಗೆ ಕೊಂಚ ರಿಯಾಯಿತಿ ನೀಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸರ್ಕಾರ ಈಗಾಗಲೇ ಪತ್ರವನ್ನೂ ಬರೆಯಲಾಗಿದೆ. ಈ ಬಗ್ಗೆ ಆಯೋಗ ಸೂಕ್ತ ತೀರ್ಮಾನವನ್ನು ಆದಷ್ಟು ಬೇಗ ತೆಗೆದುಕೊಳ್ಳುವ ವಿಶ್ವಾಸವಿದೆ. ಈ ಮಧ್ಯೆ ರಾಜ್ಯ ಸಚಿವ ಸಂಪುಟದ ಸದಸ್ಯರು ಮಳೆಬಾಧಿತ ಪ್ರದೇಶಗಳಲ್ಲಿ ಕೆಲಸ ಮಾಡಿ ಜನರ ಕಷ್ಟಗಳನ್ನು ಆಲಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರುಗಳೂ ತಮ್ಮ ತಮ್ಮ‌ ಜಿಲ್ಲೆಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅತಿವೃಷ್ಠಿಯ ಸಂಕಷ್ಟದ ಸಂದರ್ಭದಲ್ಲಿ ಜನರ ಜೊತೆ ಸರ್ಕಾರವಿದೆ ಎಂದು ತಿಳಿಸಿದರು.

 ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗಿದ್ದು, ಮಳೆಯಿಂದಾಗಿ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯು ತುಂಬಿ ಹರಿಯುವ ನೀರು ನಗರದ ಮೂಲಕ ಹಾದು ಹೋಗುವ ರಾಜಕಾಲುವೆ ಹಿಡಿಸದೆ ಬಿ.ಬಿ ರಸ್ತೆಯ ಮೇಲೆ ಹರಿಯುತ್ತಿರುವುದನ್ನು   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ವೀಕ್ಷಿಸಿದರು. ನಂತರ ಶಿಡ್ಲಘಟ್ಟ ತಾಲ್ಲೂಕಿನ ಆನೆಮಡುಗು  ಅಗ್ರಹಾರ ಕೆರೆ ಏರಿ ಹೊಡೆದಿರುವುದನ್ನು ವೀಕ್ಷಿಸಿದರು.

ಈ ವೇಳೆ ಸಚಿವರಾದ ಡಾ: ಕೆ.ಸುಧಾಕರ್ , ಆರ್.ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News