ಮಡಿಕೇರಿ ಜಿಲ್ಲಾ ಕಸಾಪ ಚುನಾವಣೆ: ಕೇಶವ ಕಾಮತ್ ಗೆ ಜಯ
ಮಡಿಕೇರಿ ನ.21 : ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕೊಡಗು ಲೇಖಕರ ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಆಯ್ಕೆಯಾಗಿದ್ದು, ಮರು ಆಯ್ಕೆ ಬಯಸಿದ್ದ ಪರಿಷತ್ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್ ಪರಾಭವಗೊಂಡಿದ್ದಾರೆ.
ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಕೇಂದ್ರಗಳಲ್ಲಿ ಇಂದು ನಡೆದ ಚುನಾವಣೆಯಲ್ಲಿ ಎಂಪಿ.ಕೇಶವ ಕಾಮತ್ 926 ಮತಗಳನ್ನು ಪಡೆದು ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಇವರ ಪ್ರತಿಸ್ಪರ್ಧಿ ಬಿ.ಎಸ್.ಲೋಕೇಶ್ ಸಾಗರ್ 790 ಮತಗಳನ್ನು ಪಡೆದುಕೊಂಡರು.
ತೀವ್ರ ಕುತೂಹಲ ಮೂಡಿಸಿದ್ದ ಚುನಾವಣೆಯಲ್ಲಿ ಎಂ.ಪಿ.ಕೇಶವ ಕಾಮತ್ ಮಡಿಕೇರಿ ತಾಲ್ಲೂಕಿನಲ್ಲಿ 309 ಮತಗಳನ್ನು ಪಡೆದುಕೊಂಡಿದ್ದರೆ, ಲೋಕೇಶ್ ಸಾಗರ್ 159 ಮತಗಳನ್ನು ಪಡೆದರು. ವಿರಾಜಪೇಟೆ ತಾಲ್ಲೂಕಿನಲ್ಲಿ ಕೇಶವ ಕಾಮತ್ 149 ಮತ್ತು ಲೋಕೇಶ್ ಸಾಗರ್ 66 ಮತಗಳನ್ನು ಪಡೆದುಕೊಂಡರು.
ಸೋಮವಾರಪೇಟೆ ತಾಲೂಕಿನಲ್ಲಿ ಕೇಶವ ಕಾಮತ್ 178, ಲೊಕೇಶ್ ಸಾಗರ್ 305 ಮತಗಳನ್ನು, ಕುಶಾಲನಗರದಲ್ಲಿ ಕೇಶವ ಕಾಮತ್ 136, ಲೋಕೇಶ್ ಸಾಗರ್ 200 ಮತಗಳನ್ನು ಹಾಗೂ ಪೊನ್ನಂಪೇಟೆ ತಾಲ್ಲೂಕಿನಲ್ಲಿ ಕೇಶವ ಕಾಮತ್ 154 ಮತ್ತು ಲೋಕೇಶ್ ಸಾಗರ್ 60 ಮತಗಳನ್ನು ಪಡೆದುಕೊಂಡರು.
ಉತ್ಸಾಹದ ಮತದಾನ
ಜಿಲ್ಲೆಯ ಐದು ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ಮತದಾರರು ಉತ್ಸಾಹದಿಂದ ಮತದಾನ ಮಾಡಿದ್ದು ವಿಶೇಷ. ಪ್ರತಿ ಮತಗಟ್ಟೆಯಲ್ಲಿ ಅಭ್ಯರ್ಥಿಗಳಾದ ಕೇಶವ ಕಾಮತ್ ಮತ್ತು ಲೋಕೇಶ್ ಸಾಗರ್ ಬೆಂಬಲಿಗರು ಮತದಾರರನ್ನು ಓಲೈಸುತ್ತಿದ್ದುದು ಕಂಡು ಬಂದಿತು.
ಮಡಿಕೇರಿಯ ತಾಲೂಕು ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ, ತಾಲೂಕಿನ 766 ಒಟ್ಟು ಮತದಾರರಲ್ಲಿ 468 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದರು. ಪೊನ್ನಂಪೇಟೆಯ ತಹಶೀಲ್ದಾರ್ ಕಛೇರಿಯಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ 280 ಮತದಾರರ ಪೈಕಿ 215 ಮಂದಿ, ಕುಶಾಲನಗರದ ನಾಡಕಛೇರಿಯಲ್ಲಿ ನಡೆದ ಮತದಾನದಲ್ಲಿ 424 ಮತದಾರರ ಪೈಕಿ 337 ಮಂದಿ, ವಿರಾಜಪೇಟೆ ತಾಲ್ಲೂಕಿನ ತಹಶೀಲ್ದಾರ್ ಕಛೇರಿಯಲ್ಲಿನ ಮತದಾನದಲ್ಲಿ 303 ಮತದಾರರ ಪೈಕಿ 216 ಮಂದಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ 647 ಮತದಾರರಲ್ಲಿ 490 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದರು.
ವಿಜಯೋತ್ಸವ
ಕನ್ನಡ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೇಶವ ಕಾಮತ್ ಬೆಂಬಲಿಗರು ಜಯಘೋಷದೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಿದರು. ಗೆಲುವಿನ ಕುರಿತು ನೂತನ ಅಧ್ಯಕ್ಷರು ಹರ್ಷ ವ್ಯಕ್ತಪಡಿಸಿದರು.