ಶಿವಮೊಗ್ಗ ಜಿಲ್ಲಾ ಕಸಾಪ ಚುನಾವಣೆ: ನಾಲ್ಕನೇ ಬಾರಿ ಅಧ್ಯಕ್ಷರಾಗಿ ಡಿ.ಮಂಜುನಾಥ್ ಆಯ್ಕೆ
ಶಿವಮೊಗ್ಗ, ನ.21: ತೀವ್ರ ಕುತೂಹಲ ಮೂಡಿಸಿದ್ದ ಜಿಲ್ಲಾ ಕಸಾಪ ಚುನಾವಣೆಯಲ್ಲಿ ಡಿ.ಮಂಜುನಾಥ್ ನಾಲ್ಕನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಂತಿಮವಾಗಿ ಮಂಜುನಾಥ್ 2,756 ಮತಗಳನ್ನು ಪಡೆಯುವ ಮೂಲಕ ವಿಜಯಿ ಆಗಿದ್ದಾರೆ. ಇನ್ನುಳಿದ ಅಭ್ಯರ್ಥಿಗಳಾದ ಡಿ.ಬಿ.ಶಂಕರಪ್ಪ ಅವರು 2,314, ಶಿ.ಜು. ಪಾಶಾ 249, ಗಾರಾ ಶ್ರೀನಿವಾಸ್ 49 ಮತಗಳನ್ನು ಪಡೆದಿದ್ದಾರೆ. ಚಲಾವಣೆಯಾದ ಮತಗಳಲ್ಲಿ 49 ಮತಗಳು ತಿರಸ್ಕೃತಗೊಂಡಿವೆ.
ಪತ್ರಕರ್ತರಾದ ಶಿಜುಪಾಶ, ಗಾ.ರಾ.ಶ್ರೀನಿವಾಸ್, ಮಾಜಿ ಅಧ್ಯಕ್ಷ ಡಿ.ಮಂಜುನಾಥ್ ಹಾಗೂ ನಿಕಟಪೂರ್ವ ಅಧ್ಯಕ್ಷ ಡಿ.ಬಿ.ಶಂಕರಪ್ಪ ಸೇರಿ ನಾಲ್ವರು ಕಣದಲ್ಲಿದ್ದರು. ನಿಕಟಪೂರ್ವ ಮತ್ತು ಮಾಜಿ ಅಧ್ಯಕ್ಷರ ನಡುವೆ ವಾಕ್ಸಮರ ಜೋರಾಗಿತ್ತು. ಈ ನಡುವೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾಜಿ ಅಧ್ಯಕ್ಷರು ಸ್ಪರ್ಧೆ ಮಾಡುವಂತಿಲ್ಲ ಎಂಬ ನಿಯಮಾವಳಿ ಇದ್ದು ಮಾಜಿಗಳು ಸ್ಪರ್ಧೆಯಿಂದ ಅನರ್ಹರಾಗುತ್ತಾರೆ ಎಂದೇ ಪ್ರಚಾರ ನಡೆಸಲಾಗಿತ್ತು. ಕೋರ್ಟ್ ತೀರ್ಪಿನ ನಂತರ ವಿವಾದ ತಣ್ಣಗಾಗಿ ಅಂತಿಮವಾಗಿ ಡಿ.ಮಂಜುನಾಥ್ ಗೆಲುವಿನ ನಗೆ ಬೀರಿದ್ದಾರೆ.
ಸಾಹಿತ್ಯ ಗ್ರಾಮ ನಿರ್ಮಾಣದ ವಿಚಾರದಲ್ಲಿ ಡಿ.ಮಂಜುನಾಥ್ ಹಾಗೂ ಡಿ.ಬಿ.ಶಂಕರಪ್ಪ ನಡುವೆ 5 ವರ್ಷದಿಂದಲೂ ಟೀಕೆ ಟಿಪ್ಪಣಿಗಳು ಕೇಳಿಬಂದಿದ್ದವು. ಹಣ ದುರುಪಯೋಗ, ಅಡಿಗಲ್ಲು ಮಾಯ, ತಾಲ್ಲೂಕು ಭವನಗಳ ಅಪೂರ್ಣ ಸೇರಿದಂತೆ ಅನೇಕ ವಿಷಯಗಳು ಚುನಾವಣೆಯಲ್ಲಿ ತೇಲಿಬಂದಿದ್ದವು. ಡಿ.ಬಿ.ಶಂಕರಪ್ಪ ಅವರಿಗೆ ಸಂಘಪರಿವಾರದ ಬೆಂಬಲ ಕೂಡ ಸಿಕ್ಕಿತ್ತು. ಆದರೂ ನಿರೀಕ್ಷಿತ ಫಲಿತಾಂಶ ಪಡೆಯಲು ವಿಫಲರಾಗಿದ್ದಾರೆ.
ಯಾವುದೇ ಪಕ್ಷದ ಪ್ರತಿನಿಧಿ ಅಲ್ಲ
ನೂತನ ಅಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಇಂದು ನಾವು ಅವನಾರವ ಅವನಾರವ ಎಂದು ಹೇಳೋದಲ್ಲ. ಎಲ್ಲರೂ ನಮ್ಮವರೇ ಎಂಬ ರೀತಿ ಕೆಲಸ ಮಾಡಬೇಕಿದೆ. ಕುವೆಂಪು ಅವರು ಹೇಳಿದ ಹಾಗೆ ಕನ್ನಡಕ್ಕಾಗಿ ಕೈಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎನ್ನುವುದು ಬರಿ ಸ್ಲೋಗನ್ ಅಲ್ಲ. ಆ ಜವಾಬ್ದಾರಿಯನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ನಡೆಯಬೇಕಿದೆ. ಕನ್ನಡದ ಪ್ರಾತಿನಿಧಿಕ ಸಂಸ್ಥೆಯಲ್ಲಿ ರಾಜಕೀಯ ಪ್ರವೇಶ ಪಡೆದು ಬುಡಕ್ಕೆ ಕೊಡಲಿಪೆಟ್ಟು ಬೀಳುವ ಪ್ರಯತ್ನ, ಷಡ್ಯಂತ್ರ ನಡೆಯಿತ್ತಲ್ಲ ಅದರ ವಿರುದ್ಧ ಜನರು ತೀರ್ಪು ನೀಡಿದ್ದಾರೆ. ಹಾಗಾಗಿ ವಿನಂತಿ ಮಾಡುವುದೇನೆಂದರೆ ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾದ ಕಸಾಪವನ್ನು ರಾಜಕೀಯ ರಹಿತವಾಗಿಯೇ ಅದನ್ನ ಉಳಿಸಿ. ನಾನು ಯಾವುದೇ ಪಕ್ಷದ ಪ್ರತಿನಿಧಿ ಅಲ್ಲ. ಯಾವ ಪಕ್ಷಕ್ಕೂ ಸದಸ್ಯನೂ ಅಲ್ಲ. ನನ್ನ ಕೊನೆ ಉಸಿರು ಇರುವವರೆಗೂ ಕನ್ನಡದ ವಿಷಯ ಬಂದಾಗ ಭಾಷೆಯನ್ನು ಕಟ್ಟವ ಕೆಲಸ ಮಾಡುತ್ತೇನೆ ಎಂದರು.