×
Ad

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮಡ್ಡೀಕೆರೆ ಗೋಪಾಲ್ ಆಯ್ಕೆ

Update: 2021-11-21 21:35 IST

ಮೈಸೂರು, ನ.21: ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೆ ಮಡ್ಡೀಕೆರೆ ಗೋಪಾಲ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪ್ರತಿಸ್ಪರ್ಧಿ ಬನ್ನೂರು ಕೆ.ರಾಜು ಅವರಿಗಿಂತ 964 ಮತಗಳ ಅಂತರದೊಂದಿಗೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾರತ್ಯ ವಹಿಸಿಕೊಂಡಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ರವಿವಾರ ಜಿಲ್ಲೆಯಲ್ಲಿ ನಡೆದ ಚುನಾವಣೆಯಲ್ಲಿ ಈ ಹಿಂದೆಯೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮಡ್ಡಿಕೆರೆ ಗೋಪಾಲ್ ಎರಡನೇ ಬಾರಿಗೆ ಆಯ್ಕೆಯಾದರು.

ಸಾಹಿತಿ ಬನ್ನೂರು ಕೆ. ರಾಜು ಅವರು ಮಡ್ಡಿಕೆರೆ ಗೋಪಾಲ್ ಅವರಿಗೆ ಮತ ಎಣಿಕೆಯ ಆರಂಭದಿಂದಲೂ ತೀವ್ರ ಪೈಪೋಟಿ ನೀಡಿದರು. ಅಂತಿಮವಾಗಿ ಮಡ್ಡಿಕೆರೆ ಗೋಪಾಲ್ 964 ಮತಗಳ ಅಂತರದಿಂದ ಜಯಭೇರಿ ಭಾರಿಸಿದರು.

ಮಡ್ಡಿಕೆರೆ ಗೋಪಾಲ್ 2565, ಬನ್ನೂರು ಕೆ.ರಾಜು 1601 ಹಾಗೂ ಕೆ ಎಸ್.ನಾಗರಾಜು 1485 ಮತಗಳನ್ನು ಪಡೆದರು. 71 ಮತಗಳು ತಿರಸ್ಕೃತಗೊಂಡವು. 

ಜಿಲ್ಲೆಯ 17 ಮತಗಟ್ಟೆಗಳಲ್ಲಿ ಸುಗಮವಾಗಿ ಮತದಾನ ನಡೆಯಿತಾದರೂ  ಮೈಸೂರು ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಇನ್ನು, ಜಿಲ್ಲೆಯಾದ್ಯಂತ ಒಟ್ಟು 13,378 ಮತದಾರರಲ್ಲಿ 974 ಮಹಿಳೆಯರು ಹಾಗೂ 4,748 ಪುರುಷರು ಸೇರಿ 5,722 ಮತದಾರರು ಮತ ಚಲಾಯಿಸಿದ್ದು ಶೇ.42.77 ರಷ್ಟು ಮಾತ್ರವೇ ಮತದಾನವಾಗಿದೆ. ಮೈಸೂರಿನಲ್ಲಿ ಒಟ್ಟು 7783 ಮತದಾರರಲ್ಲಿ  2618 ಮಂದಿ ಮಾತ್ರವೇ ಮತಚಲಾಯಿಸಿದ್ದಾರೆ. ಇನ್ನು, ತಾಲೂಕುವಾರು ಮತದಾನದಲ್ಲಿ ತಿ. ನರಸೀಪುರದಲ್ಲಿ 285 (ಶೇ.22.37), ಬನ್ನೂರಿನಲ್ಲಿ 474 (ಶೇ.73.37), ಹುಣಸೂರಿನಲ್ಲಿ 563 (ಶೇ.51.89), ನಂಜನಗೂಡು 181 (ಶೇ.44.25), ಎಚ್.ಡಿ.ಕೋಟೆ 368 (ಶೇ.55.09), ಕೆ.ಆರ್. ನಗರ 574 (ಶೇ.61), ಪಿರಿಯಾಪಟ್ಟಣ 387 (ಶೇ.44.43), ಸರಗೂರು 132 (ಶೇ.65.35) ಹಾಗೂ ಸಾಲಿಗ್ರಾಮದಲ್ಲಿ 140 (53.44) ರಷ್ಟು ಮತದಾನವಾಗಿದೆ. ಇವುಗಳಲ್ಲಿ ಬನ್ನೂರು ಕ್ಷೇತ್ರ ವ್ಯಾಪ್ತಿಯಲ್ಲೇ ಹೆಚ್ಚಿನ ಮತದಾನವಾಗಿರುವುದು ಗಮನ ಸೆಳೆದಿದೆ.

ಇನ್ನು, ಬಿ.ಎಲ್. ಭೈರಪ್ಪ, ಸಿಪಿಕೆ, ಭೈರವಮೂರ್ತಿ, ಪ್ರೊ. ಅರವಿಂದ ಮಾಲಗತ್ತಿ ಸೇರಿದಂತೆ ಹಲವರು ಹಿರಿಯ ಸಾಹಿತಿಗಳು ಮತ ಚಲಾಯಿಸಿದರು. ಮಾಜಿ ಅಧ್ಯಕ್ಷರಾದ ಡಾ.ವೈ.ಡಿ; ರಾಜಣ್ಣ, ಎಂ. ಚಂದ್ರಶೇಖರ್, ಕೆ.ಆರ್.ನಗರದಲ್ಲಿ ಶಾಸಕ ಸಾ.ರಾ.ಮಹೇಶ್ ಮತ ಹಕ್ಕು ಚಲಾಯಿಸಿದರು. 

ಮಾಜಿ ಶಾಸಕರಾದ ವಾಸ, ಎಂ.ಕೆ. ಸೋಮಶೇಖರ್, ಕೌಟಿಲ್ಯ, ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದು ಕುತೂಹಲ ಕೆರಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News