ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಪ್ರಕಟ

Update: 2021-11-21 18:15 GMT

ಬೆಂಗಳೂರು, ನ. 21: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2021ನೆ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿ ಪ್ರಕಟವಾಗಿದ್ದು, ಪ್ರಾಧಿಕಾರದ ಅಧ್ಯಕ್ಷ ಅಜಕ್ಕಳ ಗಿರೀಶ ಭಟ್ ನೇತೃತ್ವದಲ್ಲಿ ನಡೆದ ಸದಸ್ಯರ ಸಭೆಯಲ್ಲಿ ಪುರಸ್ಕøತರ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಾಧಿಕಾರದ ಗೌರವ ಪ್ರಶಸ್ತಿಗೆ ವಿಜ್ಞಾನ ಲೇಖಕ ಅನಂತರಾಮು, ಲೇಖಕಿ ಗೀತಾ ಶೆಣೈ, ವಿದ್ವಾಂಸ ಟಿ.ಜಿ.ಪ್ರಭಾಕರ ಪ್ರೇಮಿ, ಅನುವಾದಕ ಈಶ್ವರಚಂದ್ರ ಹಾಗೂ ಲೇಖಕ ರಾಜಾರಾಮ್ ಹೆಗಡೆ ಆಯ್ಕೆಯಾಗಿದ್ದಾರೆ. ಗೌರವ ಪ್ರಶಸ್ತಿಯು ತಲಾ 50 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ.

ಹಾಗೆಯೇ 2020ನೆ ಸಾಲಿನಲ್ಲಿ ಪ್ರಥಮಾವೃತ್ತಿಯಲ್ಲಿ ಅನುವಾದಗೊಂಡಿರುವ ಐದು ಅನುವಾದಿತ ಪುಸ್ತಕಗಳಿಗೆ ಪುಸ್ತಕ ಬಹುಮಾನವನ್ನ ಪ್ರಕಟಿಸಲಾಗಿದ್ದು, ಈ ಬಹುಮಾನವು ತಲಾ 25 ಸಾವಿರ ರೂ.ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಈ ಬಹುಮಾನವು ಆರು ಲೇಖಕರ ಐದು ಅನುವಾದಿತ ಕೃತಿಗಳಿಗೆ ಲಭಿಸಿರುತ್ತದೆ.

ಕೆ.ಎಂ ಶ್ರೀನಿವಾಸಗೌಡ ಹಾಗೂ ಜಿ.ಕೆ.ಶ್ರೀಕಂಠ ಮೂರ್ತಿ ಕನ್ನಡದಿಂದ ಇಂಗ್ಲಿಷಿಗೆ ಅನುವಾದ ಮಾಡಿರುವ `ದಿ ಬ್ರೈಡ್ ಇನ್ ದ ರೈನಿ ಮಂಟೆನ್ಸ್' (ಮಲೆಗಳಲ್ಲಿ ಮದುಮಗಳು ಕಾದಂಬರಿಯ ಅನುವಾದ), ಶ್ರುತಿ ಬಿ.ಎಸ್‍ರ ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಗೊಂಡಿರುವ `ನನ್ನ ಬದುಕಿನ ಕಥೆ', ಲೇಖಕ ನಾಗಾ ಎಚ್.ಹುಬ್ಳಿ ಅನುವಾದ ಮಾಡಿದ `ಭೂತನಾಥ', ಟಿ.ಎಸ್. ನಾಗರಾಜ ಶೆಟ್ಟಿ ಅನುವಾದ ಮಾಡಿರುವ `ವಿಶ್ವನಾಥ ಸತ್ಯನಾರಾಯಣ' ಹಾಗೂ ನಾಗರತ್ನಾ ಹೆಗಡೆಯ ಅನುವಾದಿತ ಕೃತಿ `ರುಚಿರಾ: ಬಾಲಕಥಾ' ಕೃತಿಗಳು 2020ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿವೆ ಎಂದು ಪ್ರಾಧಿಕಾರದ ರಿಜಿಸ್ಟ್ರಾರ್ ಈಶ್ವರ ಕು. ಮಿರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News