ಬಡವರ ಪರ ಸರಕಾರ ಅಧಿಕಾರಕ್ಕೆ ಬರಲು ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ: ಸತೀಶ್ ಜಾರಕಿಹೊಳಿ

Update: 2021-11-22 16:12 GMT

ಬೆಳಗಾವಿ, ನ. 22: `ರಾಜ್ಯದಲ್ಲಿ ಮತ್ತೆ ಬಡವರ ಪರವಾದ ಸರಕಾರ ಅಧಿಕಾರಕ್ಕೆ ಬರಬೇಕಾದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಇಂದಿಲ್ಲಿ ಮನವಿ ಮಾಡಿದ್ದಾರೆ.

ಸೋಮವಾರ ಜಿಲ್ಲೆಯ ಖಾನಾಪುರದಲ್ಲಿ ಏರ್ಪಡಿಸಿದ್ದ ಜನಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, `ನಮ್ಮ ಗುರಿ ಮುಂಬರುವ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗೆಲ್ಲಬೇಕು. ಡಿ.10ರಂದು ಜರುಗುವ ವಿಧಾನ ಪರಿಷತ್ ಚುನಾವಣೆಗೆ ನಿಮ್ಮೆಲ್ಲರಿಗೂ ಚಿರಪರಿಚಿತರಿರುವ ಚನ್ನರಾಜ ಹಟ್ಟಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಅವರನ್ನು ಗೆಲ್ಲಿಸಲು ಜಿಲ್ಲೆಯ ಎಲ್ಲ ಮುಖಂಡರು ಶ್ರಮಿಸಬೇಕು ಎಂದು ಕರೆ ನೀಡಿದರು.

`ಯಾರಿಗೆ ಗೆಲ್ಲುವ ಶಕ್ತಿ, ಕೆಲಸ ಮಾಡುವ ಸಾಮಥ್ರ್ಯ ಇದೆ. ಅಂತಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಸ್ಥಳೀಯ ನಾಯಕರು ಸಭೆ ನಡೆಸಿ, ಒಮ್ಮತದಿಂದ ಚನ್ನರಾಜ್ ಹಟ್ಟಿಹೊಳಿ ಅವರನ್ನು ನೇಮಕ ಮಾಡುವ ಮೂಲಕ ರಾಜ್ಯದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಶಿಫಾರಸ್ಸು ಮಾಡಲಾಗಿತ್ತು' ಎಂದು ಅವರು ತಿಳಿಸಿದರು.

`ಮೂರು ವರ್ಷಗಳಿಂದ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ರಸ್ತೆ, ಕೆರೆ ತುಂಬಿಸುವ ಕಾರ್ಯ, ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಆ ಆಧಾರದ ಮೇಲೆ ಕಾಂಗ್ರೆಸ್ ಅಭ್ಯರ್ಥಿಗೆ ಮತಗಳನ್ನು ನೀಡಬೇಕು' ಎಂದು ಸತೀಶ್ ಜಾರಕಿಹೊಳಿ ಕೋರಿದರು.

ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಭಿವೃದ್ದಿ ಕಾರ್ಯದಲ್ಲಿ ಮುಂದಿದ್ದಾರೆ. ಅದೇ ರೀತಿಯಲ್ಲಿ ನಮ್ಮ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಇಲ್ಲಿಯೇ ಹುಟ್ಟಿ ಬೆಳೆದವರು. ಆದುದರಿಂದ ನಿಮ್ಮ ಕೆಲಸ-ಕಾರ್ಯಗಳನ್ನು ಮಾಡಿ ಕೊಡಲಿದ್ದಾರೆಂಬ ಭರವಸೆ ಇದೆ. ಆದ ಕಾರಣ ಮತದಾರರು ಮತ ನೀಡಬೇಕು ಎಂದು ಸತೀಶ್ ಜಾರಕಿಹೊಳಿ ಮನವಿ ಮಾಡಿದರು.

ಈ ವೇಳೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಪಕ್ಷದ ಮುಖಂಡರಾದ ವಿನಯ ನಾವಲಗಟ್ಟಿ, ಮಹದೇವ ಕೋಳೆಕರ, ಅನಿತಾ, ಗೀತಾ, ಅಡಿವೇಶ ಇಟಗಿ, ಯುವರಾಜ ಕದಮ್, ಸುರೇಖಾ ಕಲಕರ್ಣಿ, ಕಾರ್ತಿಕ ಪಾಟೀಲ್ ಸೇರಿದಂತೆ ವಿವಿಧ ಘಟಕದ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News