ಇಸ್ರೋದಿಂದ ಉಚಿತ ಆನ್‍ಲೈನ್ ಕೋರ್ಸ್‍ಗಳು ಆರಂಭ
ಬೆಂಗಳೂರು, ನ.22: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ನ ಜಿಐಎಸ್ ತಂತ್ರಜ್ಞಾನದ ಅವಲೋಕನ, ಕಾರ್ಬನ್ ಸೈಕಲ್ ಅಧ್ಯಯನ ಕುರಿತ ಉಚಿತ ಆನ್‍ಲೈನ್ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನಿಸಿದೆ.
ಇಸ್ರೋ ಹೊಸ ವೃತ್ತಿಪರ ಆನ್‍ಲೈನ್ ಕೋರ್ಸ್‍ಗಳನ್ನು ಪ್ರಾರಂಭಿಸಿದ್ದು, ಇದನ್ನು ಡೆಹ್ರಾಡೂನ್‍ನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ (ಐಐಆರ್‍ಎಸ್) ಆಯೋಜಿಸುತ್ತಿದೆ. IIRSನ ಅಧಿಕೃತ ವೆಬ್‍ಸೈಟ್ https://www.iirs.gov.in/ ಗೆ ಭೇಟಿ ನೀಡಿ ಕೋರ್ಸ್‍ಗಳಿಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಕೋರ್ಸ್‍ಗಳಿಗೆ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದ್ದು, ಪ್ರಸ್ತುತ ಕಾಲೇಜು ಶಿಕ್ಷಣ ಪಡೆಯುತ್ತಿರುವ ವ್ಯಕ್ತಿಯಿಂದ ಉದ್ಯೋಗದಲ್ಲಿರುವ ಯಾವುದೇ ವ್ಯಕ್ತಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ವಿವಿಧ ಅಪ್ಲಿಕೇಶನ್‍ಗಳಲ್ಲಿ ರಿಮೋಟ್ ಸೆನ್ಸಿಂಗ್ ಡೇಟಾ ಸಂಸ್ಕರಣೆಯಲ್ಲಿ ಕೆಲಸ ಮಾಡುವ ವೃತ್ತಿಪರರಿಗಾಗಿ ಒಂದು ಕೋರ್ಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಕಾರ್ಬನ್ ಸೈಕಲ್ ಅಧ್ಯಯನಕ್ಕಾಗಿ ಭೂಮಿಯ ವೀಕ್ಷಣೆ, ಕಾರ್ಬನ್ ಮಾಡೆಲಿಂಗ್, ಕಾರ್ಬನ್ ಮೌಲ್ಯಮಾಪನದಲ್ಲಿ ತೊಡಗಿರುವ ಸಂಶೋಧಕರು, ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ಮತ್ತೊಂದು ಕೋರ್ಸ್‍ಅನ್ನು ವಿನ್ಯಾಸಗೊಳಿಸಲಾಗಿದೆ.
ಕಂಪ್ಯೂಟರ್ ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್ ಸಹಾಯದಿಂದ ಅಭ್ಯರ್ಥಿಗಳನ್ನು ಭೌಗೋಳಿಕ ಮಾಹಿತಿಯೊಂದಿಗೆ ಸಂಯೋಜಿಸಲು ಮತ್ತು ಡೇಟಾ ಸಂಗ್ರಹಣೆ, ನಿರ್ವಹಣೆ, ವಿಶ್ಲೇಷಣೆ, ಸಂರಕ್ಷಣೆ ಮತ್ತು ಪ್ರಾತಿನಿಧ್ಯಕ್ಕಾಗಿ ವ್ಯವಸ್ಥೆಗಳನ್ನು ಮಾಡಲು ಮೂರನೆಯ ಕೋರ್ಸ್‍ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.