ಓ ಮೆಣಸೇ...

Update: 2021-11-22 19:30 GMT

ಹಿಂದಿಯು ಭಾರತದ ಸ್ಥಳೀಯ ಭಾಷೆಗಳ ಸ್ನೇಹಿತ.- ಅಮಿತ್ ಶಾ, ಕೇಂದ್ರ ಸಚಿವ
ಈಸ್ಟ್ ಇಂಡಿಯಾ ಕಂಪೆನಿಯವರೂ ಅಷ್ಟೇ, ತಾವು ಭಾರತೀಯರ ಪರಮಾಪ್ತರೆಂದೇ ಹೇಳಿಕೊಳ್ಳುತ್ತಿದ್ದರು.

ಮಹಾತ್ಮಾ ಗಾಂಧಿಯ ಹೆಸರಲ್ಲಿ ಕಾಂಗ್ರೆಸ್ ಅಂಗಡಿ ಹಾಕಿಕೊಂಡಿದೆ.- ಬಿ.ಎಲ್. ಸಂತೋಷ್, ಬಿಜೆಪಿ ನಾಯಕ

ಗೋಡ್ಸೆ ಹೆಸರಲ್ಲಿ ಅಂಗಡಿ ಹಾಕಿಕೊಳ್ಳುವುದಕ್ಕೆ ಕಾಲ ಪಕ್ವವಾಗಲು ನೀವು ಕಾಯುತ್ತಿರುವುದು ಜನರಿಗೆ ಗೊತ್ತಿದೆ.

ಕಾಂಗ್ರೆಸ್‌ನವರಿಗೆ ಏನೂ ಉದ್ಯೋಗವಿಲ್ಲದ ಕಾರಣ ಬಿಟ್ ಕಾಯಿನ್ ಪ್ರಕರಣವನ್ನು ಎತ್ತಿಕೊಂಡಿದ್ದಾರೆ. - ಕೆ.ಎಸ್. ಈಶ್ವರಪ್ಪ, ಸಚಿವ
 ಉದ್ಯೋಗ ಉಳ್ಳವರು ಭ್ರಷ್ಟಾಚಾರದಲ್ಲಿ ತಲ್ಲೀನರಾಗಿರುವಾಗ ಉದ್ಯೋಗರಹಿತರು ಆ ಕುರಿತು ಮಾತನಾಡಲೂ ಬಾರದು ಅಂತಿದ್ದೀರಾ?

ಕನ್ನಡ ಉಳಿಸಿ, ಕಟ್ಟಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು.- ಡಾ.ಜಿ. ಪರಮೇಶ್ವರ್, ಶಾಸಕ
ಹಿಂದಿ, ಸಂಸ್ಕೃತ ಹೇರಿಕೆಯ ವಿರುದ್ಧ ನೇರವಾಗಿ ಯಾವಾಗ ಮಾತನಾಡುತ್ತೀರಿ?

ಆಪರೇಶನ್ ಕಮಲವನ್ನು ರಾಷ್ಟ್ರೀಕರಣ ಮಾಡಿ ರಾಷ್ಟ್ರಪ್ರೇಮ ಮೆರೆದ ಕುಖ್ಯಾತಿ ಬಿಜೆಪಿಯದ್ದು. - ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಗದ್ದುಗೆಗಾಗಿ ಎಲ್ಲ ತತ್ವಾದರ್ಶಗಳನ್ನು ಚರಂಡಿಗೆಸೆದು ಬಿಜೆಪಿಯ ಮಡಿಲು ಸೇರಿ ಅದನ್ನು ವೈಭವೀಕರಿಸಿದ ಪ್ರಖ್ಯಾತಿ ನಿಮ್ಮದು.

ಜೆಡಿಎಸ್‌ನಿಂದ ಒಂದಲ್ಲ, ಎರಡೂ ಕಾಲು ಹೊರಗಿಟ್ಟಿದ್ದೇನೆ. - ಜಿ.ಟಿ.ದೇವೇಗೌಡ, ಶಾಸಕ
ನಿಮ್ಮ ಯಾವೆಲ್ಲ ಅಂಗಗಳು ಎಲ್ಲೆಲ್ಲಿವೆ ಎಂದು ಸಾರ್ವಜನಿಕರಿಗೆ ತಿಳಿಸುತ್ತಿರಬೇಕಾದ ಅಗತ್ಯವಿದೆಯೇ?

ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳು ಬುದ್ಧನ ಪ್ರತಿಮೆಯನ್ನು ನಾಶಪಡಿಸಿರುವುದು ಬುದ್ಧನ ಅಹಿಂಸೆಯ ಸಂದೇಶವು ದೂರದವರೆಗೆ ಹರಡುವುದನ್ನು ತಡೆಯುವ ಪಿತೂರಿಯ ಭಾಗ - ಯೋಗಿ ಆದಿತ್ಯನಾಥ್, ಉ.ಪ್ರ.ಸಿಎಂ
ನೀವು ತಾಲಿಬಾನಿ ಮತಾಂಧತೆಯ ಪ್ರತಿನಿಧಿಯಾಗಿ ತಾಲಿಬಾನ್ ಅನ್ನು ಟೀಕಿಸುವುದೇ?

ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರು ಬೆಲೆ ಕಟ್ಟಲಾಗದಂತಹ ಪ್ರೀತಿ ತೋರಿಸುತ್ತಿದ್ದು, ದಿನೇ ದಿನೇ ಬಿಜೆಪಿ ಶಕ್ತಿ ಹೆಚ್ಚುತ್ತಿದೆ. - ಬಿ.ವೈ. ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
‘ಬೆಲೆ ಕಟ್ಟುವ’ ವಿಷಯ ಬಂದಿರುವುದು ‘ಕಮಲ’ಕ್ಕೆ ವಿರುದ್ಧವಾದ ಯಾವುದಾದರೂ ಆಪರೇಷನ್ ಸಾಧ್ಯತೆಯ ಹಿನ್ನೆಲೆಯಲ್ಲಿ ಅಲ್ಲ ತಾನೇ?

ಹಿಂದೂ ಸಂಸ್ಕೃತಿಯಿಂದ ವಿಮುಖರಾಗಿರುವುದೇ ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಅರಾಜಕತೆ ಉಂಟಾಗಲು ಕಾರಣ - ಸುನೀಲ್ ಕುಮಾರ್, ಸಚಿವ
ನೀವೇನೇ ಹೇಳಿ, ಅವರು ಮನು ಸಂಸ್ಕೃತಿಗಿಂತ ಅರಾಜಕತೆ ಉತ್ತಮ ಎಂದು ನಂಬಿದ್ದಾರೆ.

ಎಲ್ಲ ವರ್ಗ, ಜಾತಿ, ಧರ್ಮದಿಂದ ಕೂಡಿದ ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಕಾಂಗ್ರೆಸ್ ಅನಿವಾರ್ಯ. - ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ಮುಖಂಡ
ಮೊದಲು ನೀವು ‘ಎಲ್ಲ ವರ್ಗ, ಜಾತಿ, ಧರ್ಮದಿಂದ ಕೂಡಿದ ಬಲಿಷ್ಠ’ ಕಾಂಗ್ರೆಸ್ ಅನ್ನು ನಿರ್ಮಿಸಿ ತೋರಿಸಿ.

ಹಸುವಿನ ಸೆಗಣಿ ಮತ್ತು ಗಂಜಲ ಒಬ್ಬ ವ್ಯಕ್ತಿಯ ಜೊತೆಗೆ ದೇಶದ ಆರ್ಥಿಕತೆಯನ್ನೂ ಬಲಪಡಿಸುತ್ತದೆ. - ಶಿವರಾಜ್‌ಸಿಂಗ್ ಚವ್ಹಾಣ್, ಮ.ಪ್ರ.ಸಿಎಂ
ಅದಕ್ಕಾಗಿ ನೀವು ಮೂರು ಹೊತ್ತು ಅದನ್ನೇ ತಿನ್ನಿ. ಆದರೆ ದೇಶಕ್ಕೆ ತಿನ್ನಿಸಲು ಮಾತ್ರ ಹೋರಾಡಬೇಡಿ.

ನಿಜವಾದ ಕಾಂಗ್ರೆಸಿಗರು ಯಾರೂ ಮದ್ಯಪಾನ ಮಾಡುವುದಿಲ್ಲ. - ವೀರಪ್ಪಮೊಯ್ಲಿ, ಮಾಜಿ ಸಿಎಂ
ಹಾಗಾದರೆ ಕಾಂಗ್ರೆಸ್‌ನಲ್ಲಿ ನಿಜವಾದ ಕಾಂಗ್ರೆಸಿಗರು ಯಾರೂ ಉಳಿದಿಲ್ಲವೇ?

ನಮ್ಮ ಸರಕಾರ ಎಂದಿಗೂ ಯೋಧರ ಕೈಗಳನ್ನು ಕಟ್ಟಿ ಹಾಕುವುದಿಲ್ಲ.- ರಾಜನಾಥ್ ಸಿಂಗ್, ಕೇಂದ್ರ ಸಚಿವ
ರಾಜಕೀಯ ಲಾಭಗಳಿಗಾಗಿ ಯೋಧರ ಜೀವಗಳನ್ನು ಅಪಾಯಕ್ಕೆ ಒಡ್ಡುವುದಿಲ್ಲ ಎಂಬ ಆಶ್ವಾಸನೆಯನ್ನೂ ಕೊಟ್ಟು ಬಿಡಿ.

ನಳಿನ್‌ಕುಮಾರ್ ಕಟೀಲು ಹಸುವಿನಂತಹ ಮನುಷ್ಯ. ಅವರಿಗೆ ಭ್ರಷ್ಟಾಚಾರದ ಕಲ್ಪನೆಯೇ ಇಲ್ಲ. - ಎಂ.ಪಿ. ರೇಣುಕಾಚಾರ್ಯ, ಶಾಸಕ
ನಿಮ್ಮ ಈ ಬಗೆಯ ಅಪಮಾನಕಾರಿ ಹೋಲಿಕೆಗಳ ವಿಷಯ ಹಸುವಿಗೆ ತಿಳಿದರೆ ಅದು ಬಂದು ನಿಮ್ಮನ್ನು ತಿವಿಯುವುದು ಖಂಡಿತ.

ತಮಗೆ ಬಹುಮತ ಇದೆ, ತಾವು ಏನು ಮಾಡಿದರೂ ನಡೆಯುತ್ತದೆ ಎಂದು ತೋರಿಸಲು ಮೋದಿ ಸರಕಾರ ಹೊರಟಿದೆ. - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
ನೀವೇನು ಮಾಡಿದರೂ ನಾವು ಸುಮ್ಮನಿರುತ್ತೇವೆಂದು ನೀವು ಅವರಿಗೆ ಮನವರಿಕೆ ಮಾಡಿಸಿದ್ದರ ಪರಿಣಾಮ ಅದು.

ಮುಂದಿನ ಬಾರಿ ಸಚಿವ ಸೋಮಣ್ಣ ಮತ್ತು ನನಗೆ ರಾಜ್ಯದ ಚುನಾವಣಾ ಉಸ್ತುವಾರಿ ಕೊಟ್ಟರೆ 130 ಸ್ಥಾನವನ್ನು ಗೆದ್ದು ತೋರಿಸುತ್ತೇವೆ.
- ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ನಿಮ್ಮ ಪಕ್ಷದಲ್ಲಿ ಯಾರಿಗೆ ಯಾವ ಹೊಣೆ ವಹಿಸಬೇಕೆಂಬ ಜವಾಬ್ದಾರಿಯನ್ನು ಕಾಂಗ್ರೆಸ್‌ನವರಿಗೆ ವಹಿಸಿ ಕೊಟ್ಟರೆ ಅವರು ಖಂಡಿತ ನಿಮ್ಮ ಬೇಡಿಕೆ ಈಡೇರಿಸುತ್ತಾರೆ.

ಬಸವಣ್ಣನ ವಚನಗಳಲ್ಲಿ ಒಂದನ್ನಾದರೂ ಪಾಲಿಸಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ. - ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಆದರೆ ಅಧಿಕಾರ ಎಲ್ಲಿ ಉಳಿಯುತ್ತದೆ?

ಬಿಟ್ ಕಾಯಿನ್ ಹಗರಣ ಭೂತ ಬಂತು ಭೂತ ಎಂದು ಮಕ್ಕಳನ್ನು ಹೆದರಿಸುವ ಆಟಿಕೆಯಂತಿದೆ. - ಗೋವಿಂದ ಕಾರಜೋಳ, ಸಚಿವ
ಅಂತಹ ಆಟಿಕೆಗೆ ನೀವು ಅಷ್ಟೊಂದು ಹೆದರಿ ನಡುಗುತ್ತಿರುವುದೇಕೆ?

ಸಂಸತ್ ಮತ್ತು ಶಾಸನ ಸಭೆಗಳಲ್ಲಿ ಸುಗಮ ಕಲಾಪ ನಡೆಸಲು ಸದಸ್ಯರಿಗೆ ನೀತಿ ಸಂಹಿತೆ ರೂಪಿಸಲು ಇದು ಸಕಾಲ.
- ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್
ನಿಮ್ಮ ಪಕ್ಷ ವಿಪಕ್ಷವಾಗಿದ್ದಾಗ ಏನೆಲ್ಲಾ ಮಾಡಿತ್ತೋ ಅದನ್ನೇ ನೀತಿ ಸಂಹಿತೆಯಾಗಿಸಿದರೆ ಹೇಗೆ?

ರಾಜ್ಯದಲ್ಲಿ ಪಶುಗಳ ಸಂರಕ್ಷಣೆಗೆ ಪಶುಲೋಕ ಸ್ಥಾಪಿಸುವ ಉದ್ದೇಶವಿದೆ. - ಪ್ರಭು ಚವ್ಹಾಣ್, ಸಚಿವ
ಅದು ತುಂಬಾ ಮುಖ್ಯ - ಅದಕ್ಕಾಗಿ ಎಷ್ಟು ಮಾನವರನ್ನು ಬಲಿ ಕೊಡಬೇಕಾಗಿ ಬಂದರೂ ಸರಿಯೇ.

ನಾವು ನಮ್ಮ ಸ್ವಾತಂತ್ರದ ಹೀರೋಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಜಾಣತನ ತೋರಬೇಕು. - ಕಂಗನಾ ರಣಾವತ್, ನಟಿ
ಸ್ವಾತಂತ್ರ್ಯ ಸಿಕ್ಕಿದ್ದೇ 2014ರಲ್ಲಿ ಅಂದ ಮೇಲೆ ಹೀರೋಗಳು ಯಾರೆಂಬ ಬಗ್ಗೆ ಗೊಂದಲವೇ ಇಲ್ಲವಲ್ಲ?

ಸುಳ್ಳನ್ನು ಸಾವಿರ ಸಲ ಹೇಳಿದರೂ ಅದು ಸುಳ್ಳೇ ಹೊರತು ಸತ್ಯವಾಗುವುದಿಲ್ಲ. - ವಿ. ಸೋಮಣ್ಣ, ಸಚಿವ
ಕೊನೆಗೂ ಸೋಲೊಪ್ಪಿಕೊಂಡಿರಲ್ಲಾ!

ಸಮಾಜದಲ್ಲಿರುವ ಎಲ್ಲ ಸಮಸ್ಯೆಗಳಿಗೂ ಪರಿಹಾರ ಹುಡುಕುವ ನಿಟ್ಟಿನಲ್ಲಿ ಅಧ್ಯಯನ ನಡೆಸಿ ಅದಕ್ಕೆ ಪೂರಕವಾದ ಸಂಶೋಧನೆಗಳು

ನಡೆಯಬೇಕು. - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ಅಧ್ಯಯನ ನಡೆದರೆ ನೀವು ಸಮಸ್ಯೆಗಳ ಕಾರಣಗಳ ಸಾಲಿಗೆ ಸೇರದಂತೆ ನೋಡಿಕೊಳ್ಳುವುದು ಹೇಗೆ?

ನನ್ನ ಹಾಗೂ ಕುಟುಂಬದ ಬಗ್ಗೆ ಯಾರೇ ಆಗಲಿ ತಪ್ಪಾಗಿ ಮಾತನಾಡಿದರೆ ನಾನು ಕೈಕಟ್ಟಿ ಸುಮ್ಮನೇ ಕೂರಲ್ಲ. - ಪ್ರಿಯಾಂಕ್ ಖರ್ಗೆ
ಕೇವಲ ಮಾತನಾಡುವುದಕ್ಕೆ ಬಾಯಿ ಬಿಚ್ಚಿದರೆ ಸಾಕು- ಕೈಬಿಚ್ಚಬೇಕಾಗಿಲ್ಲ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...