ಸಿಎಂ ಬೊಮ್ಮಾಯಿಗೆ ಕರೆ ಮಾಡಿ ಪ್ರವಾಹ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ

Update: 2021-11-23 17:17 GMT

ಹೊಸದಿಲ್ಲಿ,ನ.23: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆ ತಲೆದೋರಿರುವ ನೆರೆಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ದೂರವಾಣಿ ಮಾತುಕತೆ ನಡೆಸಿದರು.

''ಪ್ರಧಾನಿ ನರೇಂದ್ರ ಮೋದಿಯವರು ಇಂದು ಕರೆ ಮಾಡಿ ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಜನರ ಜೀವಹಾನಿ ಹಾಗೂ ಅಪಾರ ಪ್ರಮಾಣದ ಬೆಳೆಹಾನಿ ಆಗಿರುವ ಬಗ್ಗೆ ಪ್ರಧಾನಿಯವರು ಕಳವಳ ವ್ಯಕ್ತಪಡಿಸಿದರು'' ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿಯವರಿಗೆ ವಿವರ ನೀಡಲಾಯಿತೆಂದು ಬೊಮ್ಮಾಯಿ ಹೇಳಿದ್ದಾರೆ.

ಭಾರತದ ತಂತ್ರಜ್ಞಾನ ನಗರಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರದ ವಸತಿ ಪ್ರದೇಶಗಳು ನೆರೆಹಾವಳಿಗೆ ತುತ್ತಾದ ದೃಶ್ಯಗಳು ಸುದ್ದಿವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ಮೋದಿ ಹಾಗೂ ಬೊಮ್ಮಾಯಿ ನಡುವೆ ದೂರವಾಣಿ ಮಾತುಕತೆ ನಡೆದಿದೆ.

ಬೆಂಗಳೂರಿನ ಯಲಹಂಕದಲ್ಲಿರುವ 600ಕ್ಕೂ ಅಧಿಕ ಮನೆಗಳು ಹಾಗೂ 1600ಕ್ಕೂ ಅಧಿಕ ಜನರು ನೆಲೆಸಿರುವ ವಸತಿ ಸಂಕೀರ್ಣ ಕೇಂದ್ರೀಯ ವಿಹಾರ್ ನೆರೆಯಿಂದಾಗಿ ಜಲಾವೃತಗೊಂಡಿದ್ದರಿಂದ, ಅಲ್ಲಿ ನಿವಾಸಿಗಳನ್ನು ಇತರೆಡೆಗೆ ಸಾಗಿಸಲಾಗಿತ್ತು.ಕಳೆದ ಒಂದು ತಿಂಗಳಿನಿಂದ ಸುರಿದ ಭಾರೀ ಮಳೆಯಿಂದಾಗಿ ರಾಜ್ಯದ ಹಲವಾರು ಪ್ರದೇಶಗಳು ನೆರೆ ಹಾವಳಿಗೆ ಒಳಗಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News