ಇನ್ಶೂರೆನ್ಸ್ ವರ್ಗಾವಣೆ ಮೊದಲೇ ಸವಾರ ಸಾವು: ವಿಮೆ ಕ್ಲೇಮ್ ನಿರಾಕರಿಸಿದ ಕೋರ್ಟ್
ಬೆಂಗಳೂರು, ನ.23: ಹಳೆಯ ಬೈಕ್ ಕೊಂಡುಕೊಂಡಿದ್ದ ವ್ಯಕ್ತಿ ಅದರ ವಿಮೆ ವರ್ಗಾವಣೆಗೂ ಮೊದಲೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ಮೃತನ ಕುಟುಂಬದವರಿಗೆ ಮೋಟಾರು ವಾಹನ ಅಪಘಾತ ವಿಮೆ ಕ್ಲೇಮ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಬೆಂಗಳೂರಿನ ಗ್ರಾಹಕ ಕೋರ್ಟ್ ಆದೇಶಿಸಿದೆ.
ಮೃತ ಬೈಕ್ ಮಾಲಕನ ಪತ್ನಿ ಮತ್ತು ಮಗ ಪರಿಹಾರ ನಿರಾಕರಿಸಿದ ವಿಮಾ ಸಂಸ್ಥೆಯ ವಿರುದ್ಧ ದಾಖಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಗ್ರಾಹಕ ನ್ಯಾಯಾಲಯದ ಈ ಆದೇಶ ಮಾಡಿದೆ. ಅಪಘಾತ ನಡೆದ ಸಮಯದಲ್ಲಿ ವಾಹನದ ವಿಮೆ ಅದರ ಮೂಲ ಮಾಲಕರ ಹೆಸರಿನಲ್ಲಿದೆ. ಹೀಗಾಗಿ, ಮೃತನ ಕುಟುಂಬಸ್ಥರು ಗ್ರಾಹಕ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಯಾವುದೇ ಕ್ಲೇಮ್ ಮಾಡಲು ಅರ್ಹತೆ ಹೊಂದಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ಪರ ವಕೀಲರು ವಾದಿಸಿ, ಮೋಟಾರು ವಾಹನ ಕಾಯ್ದೆಯ ಪ್ರಕಾರ, ಅರುಣ್ ಅವರ ಕುಟುಂಬವು ವಿಮಾ ಕ್ಲೇಮ್‍ಗೆ ಅರ್ಹವಾಗಿದೆ. ಮೋಟಾರು ಸೈಕಲ್ ಅರುಣ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ. ಖರೀದಿಸಿದ ಎರಡು ವಾರಗಳಲ್ಲಿ ವಿಮಾ ಪಾಲಿಸಿಯಲ್ಲಿಯೂ ಹೆಸರನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಬೈಕ್ ಖರೀದಿಸಿದ 7 ದಿನಗಳಲ್ಲೇ ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವಾದಿಸಿದ್ದರು.
ವಿಮಾ ಸಂಸ್ಥೆ ಪರ ವಕೀಲರು ವಾದಿಸಿ, ಅಪಘಾತವಾದ ಸಮಯದಲ್ಲಿ ಮೊದಲ ಮಾಲಕ ಮೊಹಮ್ಮದ್ ಹೆಸರಿನಲ್ಲಿ ಪಾಲಿಸಿ ಇತ್ತು. ಬೈಕ್ ಖರೀದಿಸಿದ ಅರುಣ್ ಮತ್ತು ವಿಮಾ ಸಂಸ್ಥೆ ನಡುವೆ ಯಾವುದೇ ಸಂಬಂಧ ಇರಲಿಲ್ಲ. ಹೀಗಾಗಿ, ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಪಾವತಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.
ವಕೀಲರ ವಾದ ಆಲಿಸಿದ ನ್ಯಾಯಪೀಠ, ಅರುಣ್ ಮತ್ತು ನ್ಯಾಷನಲ್ ಇನ್ಶುರೆನ್ಸ್ ಕಂಪೆನಿ ಲಿಮಿಟೆಡ್ ನಡುವೆ ಯಾವುದೇ ಒಪ್ಪಂದವಿರಲಿಲ್ಲ. ಹಾಗೆಯೇ, ಸಂತ್ರಸ್ತರು ಸಂಸ್ಥೆಗೆ ಯಾವುದೇ ಪ್ರೀಮಿಯಂ ಪಾವತಿಸಿಲ್ಲ. ಹೀಗಾಗಿ, ಅರ್ಜಿದಾರರನ್ನು ಇಲ್ಲಿ ಗ್ರಾಹಕರು ಎಂದು ಪರಿಗಣಿಸಲು ಬರುವುದಿಲ್ಲ ಎಂದಿದ್ದಾರೆ.
ಮೋಟಾರು ವಾಹನಗಳ ಕಾಯ್ದೆ ಅಡಿಯಲ್ಲಿ ಕ್ಲೇಮ್ ಮಾಡುವ ಹಕ್ಕುಗಳನ್ನು ಹೊಂದಿರಬಹುದು. ಆದರೆ ಗ್ರಾಹಕ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಇದು ಸಾಧ್ಯವಿಲ್ಲ. ಸಂತ್ರಸ್ತ ಕುಟುಂಬ ಮೋಟಾರು ಅಪಘಾತಗಳ ಪರಿಹಾರ ನ್ಯಾಯಮಂಡಳಿ ಎದುರು ತಮ್ಮ ಅಹವಾಲು ಸಲ್ಲಿಸಬಹುದು ಎಂದು ತಿಳಿಸಿ, ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಪ್ರಕರಣವೇನು: ಬನಶಂಕರಿ 2ನೆ ಹಂತದ ನಿವಾಸಿಯಾಗಿರುವ ಅರುಣ್ ಎಂ ಶೆಣೈ 2018ರ ನ.23ರಂದು ಮೊಹಮ್ಮದ್ ಹರ್ಷದ್ ಎಂಬುವರಿಂದ 100 ಸಿಸಿಯ ಬೈಕ್‍ವೊಂದನ್ನು ಖರೀದಿಸಿದ್ದರು. ವಾಹನದ ಮಾಲಕತ್ವವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದ ಅವರಿಗೆ ವಿಮಾ ಪಾಲಿಸಿಯನ್ನು ವರ್ಗಾಯಿಸಿಕೊಳ್ಳಲು 14 ದಿನಗಳ ಕಾಲಾವಕಾಶವಿತ್ತು. ವಿಮೆ ಪಾಲಿಸಿ ಅವಧಿ 2019 ರ ಅ.31 ವರೆಗೆ ಇದ್ದುದರಿಂದ ಅದೇ ವಿಮಾ ಪಾಲಿಸಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಯೋಜಿಸಿದ್ದರು. ದುರದೃಷ್ಟವಶಾತ್, 2018 ನವೆಂಬರ್ 30 ರಂದು ಅರುಣ್ ಅಪಘಾತದಲ್ಲಿ ಸಾವನ್ನಪ್ಪಿದರು.