ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು.ತಳವಾರ ವಿರುದ್ಧ ಅರ್ಜಿ: ಕ್ರಮಕ್ಕೆ ಸೂಚಿಸಿದ ಹೈಕೋರ್ಟ್
ಬೆಂಗಳೂರು, ನ.24: ಭ್ರಷ್ಟಾಚಾರ ಮತ್ತು ಕರ್ತವ್ಯ ನಿರ್ಲಕ್ಷ್ಯ ಸೇರಿ ಮತ್ತಿತರ ಆರೋಪಗಳ ಕುರಿತಂತೆ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು.ತಳವಾರ ವಿರುದ್ಧ ಲೋಕಾಯುಕ್ತ ಸಂಸ್ಥೆ ಹಾಗೂ ಅಧಿಕಾರಿಗಳು ನೀಡಿರುವ ವರದಿ ಆಧರಿಸಿ ಕ್ರಮ ಕೈಗೊಳ್ಳಬಹುದು ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ತಳವಾರ ವಿರುದ್ಧ ಕ್ರಮ ಜರುಗಿಸಲು ಸರಕಾರಕ್ಕೆ ನಿರ್ದೇಶನ ಕೋರಿ ನಿವೃತ್ತ ಉಪನ್ಯಾಸಕ ಆರ್.ನಾರಾಯಣ ಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, ಎಚ್.ಯು. ತಳವಾರ ಅವರ ನೇಮಕ ಹಾಗೂ ನಡತೆ ಬಗ್ಗೆ ಲೋಕಾಯುಕ್ತ ಸಂಸ್ಥೆ, ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಬಿ.ವಿ.ಕೃಷ್ಣರಾವ್ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ವಿಕಾಸ್ ಕಿಶೋರ್ ಸುರಲ್ಕರ್ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ತಿಳಿಸಲಾಗಿದೆ.
ಆ ವರದಿ ಆಧರಿಸಿ ಸರಕಾರ ತನ್ನ ವಿವೇಚನೆ ಅನುಸಾರ ಕ್ರಮ ಕೈಗೊಳ್ಳಬಹುದು. ಈ ಕುರಿತ ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
ಅರ್ಜಿದಾರರ ಕೋರಿಕೆ: ತಳವಾರ ಅವರ ನೇಮಕಾತಿ ಹಾಗೂ ಅವರು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ನಡೆಸಿದ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಕುರಿತು 56ಕ್ಕೂ ಹೆಚ್ಚು ದೂರುಗಳು ಸರಕಾರಕ್ಕೆ ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆ ಲೋಕಾಯಕ್ತ ಸಂಸ್ಥೆ, ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ವಿ. ಕೃಷ್ಣರಾವ್ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ವಿಕಾಸ್ ಕಿಶೋರ್ ಸುರಲ್ಕರ್ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದರು.
ಆದರೆ, ಸರಕಾರ ವರದಿಯನ್ನು ಪರಿಗಣಿಸಿಲ್ಲ ಮತ್ತು ತಳವಾರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿ ಮೂಲ ಅರ್ಜಿದಾರ ನಾರಾಯಣ ಸ್ವಾಮಿ ಹೈಕೋರ್ಟ್‍ಗೆ ಪಿಐಎಲ್ ಸಲ್ಲಿಸಿದ್ದರು.