ಸಿದ್ದರಾಮಯ್ಯರ ಮೌನ ತುಂಬಾ ಅಪಾಯಕಾರಿ, ಅಧ್ಯಕ್ಷ ಸ್ಥಾನವನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಿ: ಡಿಕೆಶಿಗೆ ಬಿಜೆಪಿ ಸಲಹೆ

Update: 2021-11-24 12:03 GMT

ಬೆಂಗಳೂರು: 'ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಿ' ಎಂದು ಡಿ.ಕೆ ಶಿವಕುಮಾರ್ ಗೆ ಬಿಜೆಪಿ ಸಲಹೆ ನೀಡಿದೆ.

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, 'ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಒಳಜಗಳ ಬಯಲಾಗಿದೆ. ಅಭ್ಯರ್ಥಿ ಆಯ್ಕೆ, ಪ್ರಚಾರ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳಿಂದಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದೂರ ಉಳಿದಿದ್ದಾರೆ. ಏನಿದರರ್ಥ?' ಎಂದು ಪ್ರಶ್ನಿಸಿದೆ. 

''ಸಿದ್ದರಾಮಯ್ಯ ಹಾಗೂ ಡಿಕೆಶಿ ಕಾಂಗ್ರೆಸ್ ಪಕ್ಷದ ಎರಡು ಕಣ್ಣು ಇದ್ದಂತೆ ಎಂದು ಪರಮೇಶ್ವರ್‌ ಅವರು ಇತ್ತೀಚೆಗೆ ಬಣ್ಣಿಸಿದ್ದರು. ಆದರೆ ಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆಯ ವೇಳೆ ಈ ಎರಡು ಕಣ್ಣುಗಳ ದೃಷ್ಟಿ ಸಾಮರ್ಥ್ಯ ಬಯಲಾಗಿದೆ. ಡಿಕೆಶಿ ನೀಡಿದ ಪಟ್ಟಿಯ ಬಗ್ಗೆ ಸಿದ್ದರಾಮಯ್ಯ ದಿವ್ಯ‌ ಮೌನ ತಳೆದಿರುವುದೇಕೆ?'' ಎಂದು ಹೇಳಿದೆ. 

''ಪದಾಧಿಕಾರಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲೂ ಡಿಕೆಶಿ ಹಾಗೂ ಸಿದ್ದರಾಮಯ್ಯ ಮಧ್ಯೆ ಯುದ್ಧ ನಡೆಯುತ್ತಿದೆ. ಆದರೆ ಪರಿಷತ್ ಚುನಾವಣೆ ವಿಚಾರದಲ್ಲಿ ಬೇಸರಗೊಂಡಿರುವ ಸಿದ್ದರಾಮಯ್ಯ ಅವರೀಗ ಬೇರೆಯದೇ ಲೆಕ್ಕಾಚಾರದಲ್ಲಿ ತೊಡಗಿದಂತೆ ಕಾಣುತ್ತಿದೆ. ಸಿದ್ದರಾಮಯ್ಯನವರೇ, ನಿಮ್ಮ ಮೌನವು ಬೇರೇನೋ ಸೂಚಿಸುತ್ತಿರುವುದು ನಿಜವಲ್ಲವೇ?'' ಎಂದು ಪ್ರಶ್ನಿಸಿದೆ.

''ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್ ಅವರೇ, ಸಿದ್ದರಾಮಯ್ಯ ಅವರ ಮೌನ ತುಂಬಾ ಅಪಾಯಕಾರಿ. ಮುನಿಸಿಕೊಂಡಾಗಲೆಲ್ಲ ಪ್ರಕೃತಿ ಚಿಕಿತ್ಸೆಗೆ ತೆರಳುತ್ತಾರೆ. ಅಲ್ಲಿಂದ ಪ್ರಯೋಗಿಸುವ ರಾಜಕೀಯ ದಾಳ ಯಾರ್ಯಾರ ಬುಡ ಅಲ್ಲಾಡಿಸಿದೆ ಎಂಬುದು ನಿಮಗೆ ನೆನಪಿರಬಹುದಲ್ಲವೇ? ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಿ'' ಎಂದು ಡಿ.ಕೆ ಶಿವಕುಮಾರ್ ಗೆ ಬಿಜೆಪಿ ಸಲಹೆ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News