ಸಮಾನ ಮನಸ್ಕರ ವೇದಿಕೆಯಿಂದ ಹಂಸಲೇಖ ಹೇಳಿಕೆಗೆ ಬೆಂಬಲ; ಮಾಂಸ ಸೇವನೆ ಮೂಲಕ ಮಂಡ್ಯದಲ್ಲಿ ಪ್ರತಿಭಟನೆ

Update: 2021-11-24 13:32 GMT

ಮಂಡ್ಯ, ನ.24: ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆ ಬೆಂಬಲಿಸಿ ಹಾಗೂ ಪುರೋಹಿತಶಾಹಿ ದಬ್ಬಾಳಿಕೆ ಖಂಡಿಸಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಬುಧವಾರ ನಗರದಲ್ಲಿ ಮಾಂಸ ಸೇವನೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಯಿತು.

ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ನಗರದ ರೈತಸಭಾಂಗಣದ ಎದುರಿನ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಚಾಮರಾಜನಗರದ ಕಾರ್ಯಕ್ರಮವೊಂದರಲ್ಲಿ ಹಂಸಲೇಖ ಅವರು ಹೇಳಿರುವ ಮಾತುಗಳು ಸತ್ಯದಿಂದ ಕೂಡಿವೆ. ಆದರೆ, ಇದನ್ನು ಸಹಿಸದ ಕೆಲವು ಮನುವಾದಿಗಳು ಅವರ ವಿರುದ್ಧ ಎಫ್‍ಐಆರ್ ದಾಖಲಿಸಿ ತೇಜೋವಧೆ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಹಂಸಲೇಖ ಅವರು ಹೆದರಬಾರದು. ಅವರೊಂದಿಗೆ ನಾವಿದ್ದೇವೆ ಎಂದು ಪ್ರತಿಭಟನಾಕಾರರು ಘೋಷಣೆ ಮಾಡಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಚಿಂತಕ ಪ್ರೊ.ಜಿ.ಟಿ.ವೀರಪ್ಪ, ಹಂಸಲೇಖ ಅವರ ಹೇಳಿಕೆ ವಿರುದ್ಧ ನಡೆಯುತ್ತಿರುವಂತಹ ವಿದ್ಯಮಾನಗಳು ತಲತಲಾಂತರದಿಂದ ಬಂದಿರುವ ಮೌಢ್ಯತೆಯನ್ನು ಮತ್ತೆ ಮುಂದುವರಿಸುವ ಹುನ್ನಾರವಾಗಿದೆ ಎಂದು ಅಭಿಪ್ರಾಯಪಟ್ಟರು.

‘ಊಟ ತಮ್ಮಿಚ್ಚೆ, ನೋಟ ಪರರಿಚ್ಚೆ’ ಗಾದೆಯಂತೆ ಪ್ರತಿಯೊಬ್ಬರ ಆಹಾರ ಅವರ ಇಷ್ಟ. ಅವರು ತಿನ್ನಬೇಕಾದ ಆಹಾರ ತಿನ್ನುತ್ತಾರೆ. ಬೇರೆಯವರು ತಿನ್ನಬೇಡಿ ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ ಎಂದು ಅವರು ಪ್ರತಿಪಾದಿಸಿದರು.

ನಮ್ಮ ಅಜ್ಞಾನ, ತಿಳಿವಳಿಕೆ ಕೊರತೆಯಿಂದಾಗಿ ಕೇವಲ 3 ಪರ್ಸೆಂಟ್ ಇರುವ ಜನರು 87 ಪರ್ಸೆಂಟ್ ಜನರನ್ನು ನಿಯಂತ್ರಣ ಮಾಡುತ್ತಿದ್ದಾರೆ. ಆದ್ದರಿಂದ ನಾವು ನಮ್ಮ ಅಜ್ಞಾನ, ಮೌಢ್ಯತೆಯಿಂದ ಹೊರಬರಬೇಕಾಗಿದೆ ಎಂದು ಅವರು ಕಿವಿಮಾತು ಹೇಳಿದರು.

ಚಿಂತಕ ಪ್ರೊ.ಹುಲ್ಕೆರೆ ಮಹಾದೇವ, ಪ್ರೊ.ಮುಕುಂದ, ವಕೀಲರಾದ ಬಿ.ಟಿ.ವಿಶ್ವನಾಥ್, ಸುಂಡಹಳ್ಳಿ ವಿಶ್ವನಾಥ್, ಸಿಐಟಿಯುನ ಸಿ.ಕುಮಾರಿ, ಪ್ರಗತಿಪರ ಹೋರಾಟಗಾರರಾದ ಎಂ.ಬಿ.ನಾಗಣ್ಣಗೌಡ, ಷಣ್ಮುಖೇಗೌಡ, ಟಿ.ಎಲ್.ಕೃಷ್ಣೇಗೌಡ, ಟಿ.ಯಶವಂತ್, ಹುರುಗಲವಾಡಿ ರಾಮಯ್ಯ, ಲಕ್ಷ್ಮಣ್ ಚೀರನಹಳ್ಳಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಆಟೋ ಕೃಷ್ಣ, ಎಚ್.ಕೆ.ಚಂದ್ರಹಾಸ್, ಶಿವಶಂಕರ್, ಎಸ್.ಡಿ.ಜಯರಾಂ, ಸುಂಡಹಳ್ಳಿ ಮಂಜುನಾಥ್, ಟಿ.ಡಿ.ನಾಗರಾಜು, ಟಿ.ಡಿ.ಬಸವರಾಜು, ಗೊರವಾಲೆ ಚಂದ್ರಶೇಖರ್, ಗಂಗಾಧರ್ ಹನಕೆರೆ, ರಘುರಾಚಪ್ಪ ಪುರ, ಶೇಖರ್ ಹನಿಯಂಬಾಡಿ, ಜೆ.ರಾಮಯ್ಯ, ಪರಶಿವಮೂರ್ತಿ ರಾವಣಿ, ಗೋವಿಂದರಾಜು, ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 “ ನಿಮಗೆ ಆಶ್ಚರ್ಯವಾಗಬಹುದು. ಪ್ರಾಚೀನ ಹಿಂದು ವಿಧಿ ಮತ್ತು ಆಚಾರಗಳ ಪ್ರಕಾರ ದನದ ಮಾಂಸ ತಿನ್ನದಿದ್ದರೆ ಆತ ಒಳ್ಳೆಯ ಹಿಂದು ಆಗಲು ಸಾಧ್ಯವಾಗುವುದಿಲ್ಲ. ಈ ಭಾರತದಲ್ಲೇ ಒಂದು ಕಾಲವಿತ್ತು. ದನವನ್ನು ತಿನ್ನದೇ ಯಾವ ಬ್ರಾಹ್ಮಣನೂ ಬ್ರಾಹ್ಮಣನಾಗಿ ಇರಲು ಸಾಧ್ಯವಿರಲಿಲ್ಲ. ಮನೆಗೆ ಬಂದ ಸನ್ಯಾಸಿಗಳು, ರಾಜರು, ಮಹಾಪುರುಷರಿಗೆ ಉತ್ತಮವಾದ ಎತ್ತನ್ನು ಕಡಿಯಲಾಗುತ್ತಿತ್ತ್ತು ಎಂಬುದನ್ನು ನಾವು ವೇದಗಳಲ್ಲಿ ಓದಬಹುದು’ ಎಂಬ ಸ್ವಾಮಿ ವಿವೇಕಾನಂದರ ಹೇಳಿಕೆಯನ್ನು ಹಂಸಲೇಖ ಅವರನ್ನು ಖಂಡಿಸುತ್ತಿರುವವರು ಸುಳ್ಳು ಎಂದು ಸಾಬೀತು ಮಾಡಲಿ.”

-ಪ್ರೊ.ಜಿ.ಟಿ.ವೀರಪ್ಪ, ಚಿಂತಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News