ಡಿಕೆಶಿಯಿಂದ ಕಾಂಗ್ರೆಸ್ ಅಭ್ಯರ್ಥಿಯ 'ಬಿ ಫಾರ್ಮ್' ಸ್ವೀಕರಿಸಿದ ಸರಕಾರಿ ಅಧಿಕಾರಿ: ಕಾನೂನು ಕ್ರಮಕ್ಕೆ ಬಿಜೆಪಿ ಆಗ್ರಹ

Update: 2021-11-24 14:08 GMT

ಚಿಕ್ಕಮಗಳೂರು, ನ.24:  ವಿಧಾನ ಪರಿಷತ್ ಚುನಾವಣೆಗೆ ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಎಮ್ ಎಲ್ಸಿ ಗಾಯತ್ರಿ ಶಾಂತೇಗೌಡ ಅವರಿಗೆ ಪಕ್ಷದ ಮುಖಂಡರು ಬಿ ಫಾರ್ಮ್ ನೀಡುವ ಸಂದರ್ಭದಲ್ಲಿ ಅಭ್ಯರ್ಥಿಯ ಸಂಬಂಧಿಯೊಬ್ಬರು ಬಿ ಪಾರ್ಮ್ ಸ್ವೀಕರಿಸಿರುವ ವಿಷಯ ಬಿಜೆಪಿ ಪಕ್ಷದ ಮುಖಂಡರಿಗೆ ಆಹಾರವಾಗಿದೆ. 

ಗಾಯತ್ರಿ ಶಾಂತೇಗೌಡ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಪಕ್ಷದ ರಾಜ್ಯ ಮುಖಂಡರು ಈ ಹಿಂದೆ ಘೋಷಿಸಿದ್ದ ಹಿನ್ನೆಲೆಯಲ್ಲಿ ಅವರು ನ.22ರಂದು ಬಿ ಫಾರ್ಮ್ ಇಲ್ಲದೇ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರವನ್ನು ಸಲ್ಲಿಸಿದ್ದರು. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿ ಫಾರ್ಮ್ ನೀಡಲು ಬೆಂಗಳೂರಿಗೆ ಬರುವಂತೆ ಹೇಳಿದ್ದರು. ಆದರೆ ಚುನವಣಾ ಪ್ರಚಾರದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಲ್ಲಿರುವ ತಮ್ಮ ಅಳಿಯನಿಗೆ ಬಿ ಫಾರ್ಮ್ ಪಡೆದುಕೊಳ್ಳಲು ತಿಳಿಸಿದ್ದರೆಂದು ತಿಳಿದು ಬಂದಿದೆ.

ಅನಾರೋಗ್ಯದ ಕಾರಣಕ್ಕೆ ಗಾಯತ್ರಿ ಶಾಂತೇಗೌಡ ಅವರ ಅಳಿಯ ಆಸ್ಪತ್ರೆ ದಾಖಲಾಗಿದ್ದರಿಂದ ಅವರು ಸರಕಾರಿ ಇಲಾಖೆಯೊಂದರಲ್ಲಿ ಅಧಿಕಾರಿಯಾಗಿರುವ ತನ್ನ ಸಹೋದರ ಸುನೀಲ್ ಎಂಬವರನ್ನು ಕೆಪಿಸಿಸಿ ಕಚೇರಿಗೆ ಕಳುಹಿಸಿ ಬಿ ಪಾರ್ಮ್ ಪಡೆದುಕೊಳ್ಳಲು ತಿಳಿಸಿದ್ದರು. ಅದರಂತೆ ಸುನೀಲ್ ಅವರು ಗಾಯತ್ರಿ ಶಾಂತೇಗೌಡ ಅವರ ಬಿ ಫಾರ್ಮ್ ಅನ್ನು ಡಿ.ಕೆ.ಶಿವಕುಮಾರ್ ಅವರಿಂದ ಸ್ವೀಕರಿಸಿದ್ದರು. ಈ ವೇಳೆ ಪಕ್ಷದ ಕಚೇರಿಯಲ್ಲಿ ಪೊಟೊವನ್ನು ತೆಗೆಯಲಾಗಿದ್ದು, ಈ ಪೊಟೊ ಸದ್ಯ ಬಿಜೆಪಿ ಮುಖಂಡರಿಗೆ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಲು ಆಹಾರ ಸಿಕ್ಕಂತಾಗಿದ್ದು, ಬಿಜೆಪಿಯ ಐಟಿ ಸೆಲ್ ಈ ಪೊಟೊವನ್ನು ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಮಾಡಿದ್ದು, ಇದು ನೀತಿ ಸಂಹಿತೆ ಉಲ್ಲಂಘನೆ ಎಂದು ಆರೋಪಿಸಿರುವ ಜಿಲ್ಲಾ ಬಿಜೆಪಿ ಮುಖಂಡರು, ಚಿಕ್ಕಮಗಳೂರು ವಿಪ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಅವರ ಸಂಬಂಧಿ ಹಾಗೂ ಸರಕಾರಿ ಇಲಾಖೆಯ ಅಧಿಕಾರಿ ಸುನಿಲ್ ವಿರುದ್ಧ ಕ್ರಮವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಬೆಂಗಳೂರು ಅಬಕಾರಿ ಇಲಾಖೆ ಅಧಿಕಾರಿ ಬಿ.ಎಂ.ಸುನೀಲ್ ಕಾಂಗ್ರೆಸ್ ಪಕ್ಷದ ಕಚೇರಿಗೆ ತೆರಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ಚಿಕ್ಕಮಗಳೂರು ವಿಧಾನ ಪರಿಷತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರ ಬಿ.ಫಾರ್ಮ್ ಪಡೆದಿದ್ದು, ಇದು ಚುನಾವಣೆ ನೀತಿಸಂಹಿತೆ ಉಲ್ಲಂಘನೆಯಾಗಿದೆ. ಚುನಾವಣಾ ಆಯೋಗ ಇದರ ವಿರದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಹಾಗೂ ಸರಕಾರಿ ಅಧಿಕಾರಿ ಬಿ.ಎಂ.ಸುನೀಲ್ ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಮಾಡಿರುವುದು ಸ್ವಷ್ಟವಾಗಿದೆ. ಇವರ ವಿರುದ್ಧ ಚುನಾವಣೆ ನೀತಿಸಂಹಿತೆ ಉಲ್ಲಂಘನೆ ದೂರು ದಾಖಲಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News