×
Ad

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಹೇಶ ಜೋಶಿ ಆಯ್ಕೆ: ಕಸಾಪ ಪ್ರಕಟ

Update: 2021-11-24 19:46 IST
ಡಾ. ಮಹೇಶ ಜೋಶಿ

ಬೆಂಗಳೂರು, ನ.24: ರಾಜ್ಯ, ಗಡಿರಾಜ್ಯ, ಹೊರರಾಜ್ಯ ಸೇರಿದಂತೆ ಒಟ್ಟು 3,10,153 ಅರ್ಹ ಮತದಾರರಲ್ಲಿ  1,62,486 ಮತದಾರರು ಮತ ಚಲಾಯಿಸಿದ್ದು, 69,431 ಮತಗಳನ್ನು ಪಡೆದ ನಾಡೋಜ ಡಾ. ಮಹೇಶ ಜೋಶಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೆಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ 30 ಜಿಲ್ಲೆಗಳು ಸೇರಿದಂತೆ ಗಡಿ ರಾಜ್ಯಗಳು, ಹೊರರಾಜ್ಯಗಳು ಮತ್ತು ಹೊರದೇಶದ ಮತದಾರರು ಮತ ಚಲಾಯಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯದ ಅಧ್ಯಕ್ಷ, 30 ಜಿಲ್ಲಾಧ್ಯಕ್ಷರು ಹಾಗೂ 5 ಗಡಿ ರಾಜ್ಯಗಳ ಅಧ್ಯಕ್ಷರು ಸೇರಿ ಒಟ್ಟು 36 ಸ್ಥಾನಗಳಿಗೆ ಅಧ್ಯಕ್ಷರುಗಳನ್ನು ಆಯ್ಕೆ ಮಾಡುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಚುನಾವಣೆ ಪ್ರಕಿಯೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ತಹಸೀಲ್ದಾರರನ್ನು ಜಿಲ್ಲಾ ಕ.ಸಾ.ಪ. ಚುನಾವಣಾಧಿಕಾರಿಯಾಗಿ, ತಾಲ್ಲೂಕು ಕೇಂದ್ರದ ತಹಸೀಲ್ದಾರರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಉಪ ವಿಭಾಗಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ಚುನಾವಣಾ ಮೇಲ್ವಿಚಾರಕರಾಗಿಯೂ, ಜಿಲ್ಲಾಧಿಕಾರಿಗಳು ಚುನಾವಣೆ ಉಸ್ತುವಾರಿಗಳಾಗಿಯೂ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಪ್ರಕಟಣೆ ಸ್ವಷ್ಟಪಡಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ 2021ರ ಅಧಿಸೂಚನೆ ಫೆ.8ರಂದು ಹೊರಡಿಸಿ, ಚುನಾವಣಾ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿತ್ತು. ಆದರೆ ಕೋವಿಡ್-19ರ ಹಿನ್ನೆಲೆಯಲ್ಲಿ ಏ.26ರಂದು ಸರಕಾರವು ಹೊರಡಿಸಿದ ಆದೇಶದನ್ವಯ ಚುನಾವಣೆಯನ್ನು ಮುಂದೂಡಲಾಗಿತ್ತು. ಅ.12ರ ಸರಕಾರಿ ಆದೇಶದಂತೆ ಕ.ಸಾ.ಪ. ಚುನಾವಣೆಯ ಪರಿಷ್ಕøತ ವೇಳಾಪಟ್ಟಿಯನ್ನು ಸಿದ್ಧಪಡಿಸಿ, ನ.21ರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ರಾಜ್ಯದ ಎಲ್ಲಾ ತಾಲ್ಲೂಕುಗಳು ಹಾಗೂ ಕೆಲವು ಹೋಬಳಿ ಕೇಂದ್ರಗಳು, ಬೆಂಗಳೂರು ನಗರಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳು ಸೇರಿದಂತೆಒಟ್ಟು 420 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಯಾವುದೇ ಗೊಂದಲಗಳಿಲ್ಲದೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದೆ.

ಇನ್ನು ಯಾದಗಿರಿ ಜಿಲಾ ಅಧ್ಯಕ್ಷರ ಹಾಗೂ ತಮಿಳುನಾಡು ಗಡಿನಾಡ ಘಟಕ ಅಧ್ಯಕ್ಷರ ಸ್ಥಾನಕ್ಕೆ ತಲಾ ಒಬ್ಬ ಅಭ್ಯರ್ಥಿ ಅಂತಿಮವಾಗಿ ಕಣದಲ್ಲಿದ್ದ ಕಾರಣ ಹಾಗೂ ಗೋವಾ ಗಡಿನಾಡ ಘಟಕ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದೇ ಇದ್ದುದ್ದರಿಂದ ಆ ಕ್ಷೇತ್ರಗಳಲ್ಲಿ ಚುನಾವಣೆಯನ್ನು ನಡೆಸಿರುವುದಿಲ್ಲ. ಉಳಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ, 29 ಜಿಲ್ಲಾ ಘಟಕಗಳ ಅಧ್ಯಕ್ಷರ ಹಾಗೂ ಕೇರಳ ಮಹಾರಾಷ್ಟ್ರ, ಆಂಧ್ರಪ್ರದೇಶ ಗಡಿನಾಡು ಘಟಕಗಳ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ನಡೆಸಲಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News