ಅಂಬರೀಶ್ ಫೌಂಡೇಷನ್ ಟ್ರಸ್ಟ್ ಸ್ಥಾಪನೆ: ಸಂಸದೆ ಸುಮಲತಾ
ಬೆಂಗಳೂರು, ನ.24: ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್ ಅವರ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಡಾ.ಅಂಬರೀಶ್ ಫೌಂಡೇಷನ್ ಟ್ರಸ್ಟ್ ಸ್ಥಾಪಿಸಲಾಗುವುದು ಎಂದು ಸಂಸದೆ ಸುಮಲತಾ ತಿಳಿಸಿದರು.
ಬುಧವಾರ ನಗರದ ಕಂಠೀರವ ಸ್ಟುಡಿಯೊದಲ್ಲಿ ಅಂಬರೀಶ್ ಅವರ 3ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪುಷ್ಪ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು, ಸಾಮಾಜಿಕ, ಕ್ರೀಡೆ, ವೈದ್ಯಕೀಯ ಕ್ಷೇತ್ರಗಳಿಗೆ ನೆರವು ನೀಡುವುದು ಸೇರಿದಂತೆ ಹಲವು ರಂಗಗಳಲ್ಲಿ ಫೌಂಡೇಷನ್ ಕೆಲಸ ಮಾಡಲಿದೆ ಎಂದು ಹೇಳಿದರು.
ಅಂಬರೀಶ್ ಅವರು ಯಾವುದಕ್ಕೂ ಯಾರ ಬಳಿಯೂ ಕೈ ಚಾಚಿರಲಿಲ್ಲ. ಶಾಸಕರಾಗಲು, ಸಂಸದರಾಗಲು, ಸಚಿವರಾಗಲು ಯಾರ ಮನೆ ಅಥವಾ ಕಚೇರಿಗೂ ಹೋಗಲಿಲ್ಲ. ನನಗೆ ಈ ರೀತಿಯ ಪ್ರಶಸ್ತಿ ಬೇಕು ಎಂದು ಯಾರ ಬಳಿಯೂ ಕೇಳಿಲ್ಲ. ಅಭಿಮಾನಿಗಳು ಅಂಬರೀಶ್ ಅವರ ಸ್ವಾಭಿಮಾನವನ್ನು ಗೌರವಿಸಿ ಅವರ ಹಾದಿಯಲ್ಲೇ ಮುನ್ನಡೆಯಬೇಕು ಎಂದರು.
ಕೆಆರ್‍ಎಸ್ ಸುತ್ತಮುತ್ತ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಈಗ ಸ್ಥಗಿತಗೊಂಡಿದೆ ಎಂದ ಅವರು, ಮಂಡ್ಯದ ವಿಧಾನಪರಿಷತ್ ಚುನಾವಣೆಯಲ್ಲಿ ತಮ್ಮ ಬೆಂಬಲ ಯಾರಿಗೆ ಎಂದು ತಾವು ಹೇಳುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ನನಗೆ ಬೆಂಬಲ ನೀಡಿವೆ. ಈಗ ಒಂದೇ ಪಕ್ಷವನ್ನು ಬೆಂಬಲಿಸುವುದರಿಂದ ಬಹಳಷ್ಟು ಮಂದಿಗೆ ನೋವಾಗುತ್ತದೆ ಎಂದು ನುಡಿದರು.