ಮಳೆಯಿಂದ ಬೆಳೆ ಹಾನಿ: ರಾಜ್ಯ ಸರಕಾರ ಇನ್ನೂ ಸಮೀಕ್ಷೆ ಮಾಡದೆ ನಿರ್ಲಕ್ಷ್ಯ ವಹಿಸಿದೆ; ಸಿದ್ದರಾಮಯ್ಯ

Update: 2021-11-24 16:05 GMT

ಕೋಲಾರ,ನ,24 : ಕಳೆದ ವಾರ ರಾಜ್ಯಾದ್ಯಂತ ಸುರಿದ ಅಕಾಲಿಕ ಅತಿವೃಷ್ಟಿ ಮಳೆಯಿಂದ ಕೋಲಾರ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್, ರಾಜ್ಯದಲ್ಲಿ 6 ಲಕ್ಷ ಹೆಕ್ಟೇರ್  ಬೆಳೆನಷ್ಟವಾಗಿದ್ದರೂ, ರಾಜ್ಯ ಬಿಜೆಪಿ ಸರಕಾರ ಇನ್ನೂ ಸಮೀಕ್ಷೆ ಮಾಡದೆ ನಿರ್ಲಕ್ಷ್ಯ ವಹಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಇಂದು ಅಕಾಲಿಕ ಮಳೆಯಿಂದ ಹಾನಿಗೀಡಾದ ಬೆಳೆ ಸಮೀಕ್ಷೆ ನಡೆಸಲು ಕೋಲಾರ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಬೇಟಿ ನೀಡಿದ ನಂತರ ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು. ಕೋಲಾರದಲ್ಲಿ ವಾಡಿಕೆಗಿಂತ ಮೂರು ಪಟ್ಟು ಹೆಚ್ಚು ಮಳೆಯಾಗಿದೆ ಬೆಳೆ ಹಾನಿಯಿಂದ ರೈತ ಹಾಕಿದ ಬಂಡವಾಳವೂ ಸಿಕ್ಕಿಲ್ಲ ಕೋಲಾರ ಜಿಲ್ಲೆಯೊಂದರಲ್ಲೇ 50 ಸಾವಿರ ಹೆಕ್ಟೇರ್ ಬೆಳೆ ನಷ್ಟವಾಗಿದೆ. ರಾಜ್ಯ ಸರ್ಕಾರ  ಕೂಡಲೇ ಸರ್ವೇ ಮಾಡಿಸಬೇಕೆಂದು ಆಗ್ರಹಿಸಿದರು.

ಬೆಳಿಗ್ಗೆ 11 ಗಂಟೆಗೆ ವೇಳೆಗೆ ಕೋಲಾರದ ನರಸಾಪುರ ಸಮೀಪದ ಜೋಡಿಕೃಷ್ಣಾಪುರ ಗ್ರಾಮದ ರೈತ ಮುನಿಯಪ್ಪ ಹಾಗು ಮುನಿರಾಜು ಎಂಬ ರೈತರಿಗೆ ಸೇರಿದ ಆಲೂಗಡ್ಡೆ, ಟೊಮ್ಯಾಟೊ ತೋಟಕ್ಕೆ ಭೇಟಿ, ಅನಂತರ ನಾಗಲಾಪುರ, ಆನಂತರ ಬಂಗಾರಪೇಟೆಯ ಹಂಚಾಳ ಗ್ರಾಮಗಳ ರೈತರ ತೋಟಗಳಿಗೆ ಬೇಟಿ ನೀಡಿದರು. ಟೊಮೆಟೊ, ತರಕಾರಿ, ತೊಗರಿ, ಎಲೆಕೋಸು, ಹೂಕೋಸು, ಆಲೂಗಡ್ಡೆ, ಹೂವು, ಭತ್ತ, ಮತ್ತು ಅಪಾರ ರಾಗಿ ಬೆಳೆ ಹಾನಿಗೆ ಒಳಗಾಗಿದ್ದನ್ನು ಕಣ್ಣಾರೆ ಕಂಡು ಮಮ್ಮಲ ಮರುಗಿ ರೈತರಿಗೆ ಧೈರ್ಯ ತುಂಬಿದರು. ಇಷ್ಟಾದರೂ ಇನ್ನೂ ಸರ್ಕಾರ ಒಂದು ರೂಪಾಯಿ ಪರಿಹಾರವೂ ಕೊಟ್ಟಿಲ್ಲ, ನಾನು ಹೇಳಿದ ಮೇಲೆ ಜಿಲ್ಲಾ ಮಂತ್ರಿಗಳು ಜಿಲ್ಲೆಗಳಿಗೆ ಹೋಗಿದ್ದಾರೆ. ಸಿಎಂ ಕಾಟಾಚಾರದ ಬೆಳೆಹಾನಿ ವೀಕ್ಷಣೆ ಮಾಡಿದ್ದಾರೆ.  ಎನ್.ಡಿ.ಆರ್.ಎಫ್ ವಿಧಾನದಲ್ಲೆ ಪರಿಹಾರ ಕೊಡಬೇಕೆಂಬ ನಿಯಮ ಇಲ್ಲ. ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನೀಡಬಹುದು ಎಂದರು.

ನಾನು ಸಿಎಂ ಆಗಿದ್ದಾಗ ರಾಜ್ಯ ಸರ್ಕಾರದಿಂದಲೇ ಹೆಚ್ಚುವರಿ ಪರಿಹಾರ ನೀಡಿದ್ದೆ ಸರ್ಕಾರ ಕೊಡುವ ಪರಿಹಾರ ರೈತರಿಗೆ ಏನಕ್ಕು ಸಾಕಾಗಲ್ಲ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕು ಒತ್ತಾಯ ಮಾಡುವೆ, ಚುನಾವಣೆ ನೀತಿಸಂಹಿತೆ ಪರಿಹಾರ ನೀಡಲು ಅಡ್ಡ ಬರಲ್ಲ .ಸರ್ಕಾರ ಬೆಳೆಹಾನಿ ಸರ್ವೇ ಮಾಡದೆ ಪರಿಹಾರ ಹೇಗೆ ಕೊಡ್ತಾರೆ. ರೈತರು ಹಾಕಿರುವ ಬಂಡವಾಳದ ಹಣವನ್ನ  ಸರಕಾರ ನೀಡಬೇಕು ಎಂದು ಒತ್ತಾಯಿಸಿದರು. ಹಾಲಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು ಜಿಲ್ಲಾ ಪ್ರವಾಸ ಮಾಡಿ ಬೆಳೆನಷ್ಟದ ಸಮೀಕ್ಷೆ ನಡೆಸಿದ್ದಾರೆ, ಇದು ಬರೀ ಚುನಾವಣೆ ಗಿಮಿಕ್ ಆಗಿರದೆ ರೈತರ ಕಣ್ಣೀರಿಗೆ ಪರಿಹಾರ ನೀಡುವಂತಾಗಲಿ ಅನ್ನೋ ನಿರೀಕ್ಷೆಯಲ್ಲಿದ್ದಾರೆ ರೈತಾಪಿ ವರ್ಗ. 

ಈ ಸಂದರ್ಭದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರುಗಳಾದ ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ಕೆ.ಶ್ರೀನಿವಾಸಗೌಡ, ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ಮುಂತಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News