ವಿಧಾನಪರಿಷತ್ ಚುನಾವಣೆ: ಬಿಜೆಪಿ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ: ಝಮೀರ್ ಅಹ್ಮದ್ ಖಾನ್ ಆರೋಪ

Update: 2021-11-24 16:30 GMT

ಮೈಸೂರು,ನ.24: ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ವಿಧಾನಪರಿಷತ್ ಚುನಾವಣೆಗೆ ಜೆಡಿಎಸ್ ಪಕ್ಷ ಕೇವಲ 7 ಸ್ಥಾನಗಳಿಗೆ ಸ್ಪರ್ಧೆ ಮಾಡಿರುವುದು ಅನುಮಾನ ಹುಟ್ಟಿಸಿದ್ದು, ಬಿಜೆಪಿ ಜೊತೆ ಜೆಡಿಎಸ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಶಾಸಕ  ಝಮೀರ್ ಅಹ್ಮದ್ ಖಾನ್ ಆರೋಪಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನವರು ಕೇವಲ 7 ಸ್ಥಾನಗಳಿಗಷ್ಟೇ ಸ್ಪರ್ಧೆ ಮಾಡಿರುವುದನ್ನು ನೋಡಿದರೆ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿರುವುಂತೆ ಕಾಣುತ್ತದೆ. ಜೆಡಿಎಸ್ ಎಲ್ಲಾ 25 ಸ್ಥಾನಗಳಿಗೂ ಸ್ಪರ್ಧೆ ಮಾಡಬೇಕಿತ್ತು, ಇವರಿಗೆ ಅಭ್ಯರ್ಥಿಗಳು ಇಲ್ವಾ? ಇದ್ದರೂ ಹಾಕಿಲ್ವಾ? ಇದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ನವರನ್ನು ಅಷ್ಟು ಸುಲಭವಾಗಿ ನಂಬಲು ಸಾಧ್ಯವಿಲ್ಲ, ಬಿಜೆಪಿಗೆ ಲಾಭ ಮಾಡಿಕೊಡಲು ಜೆಡಿಎಸ್ ಮಾಡಿರುವ ತಂತ್ರ ಅಂತ ಅನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸಿಂಗಲ್ ಡಿಜಿಟ್ ಪಡೆಯುತ್ತೆ ಎಂದು ವ್ಯಂಗ್ಯವಾಡಿದ ಶಾಸಕ ಝಮೀರ್ ಅಹ್ಮದ್ ಖಾನ್, ಜೆಡಿಎಸ್‌ ಗೆ ಯಾವಾಗಲೂ ಕಾಂಗ್ರಸ್ಸೇ ಟಾರ್ಗೆಟ್, ಆದರೆ ಹಳೆ ಮೈಸೂರು ಭಾಗದಲ್ಲೂ ಕಾಂಗ್ರೆಸ್ ಗೆ ಒಳ್ಳೆಯ ವಾತಾವರಣ ಇದೆ ಎಂದರು.

ಇತ್ತೀಚೆಗೆ ಸಿದ್ದರಾಮಯ್ಯ ಭಾಷಣಕ್ಕೆ ತಮ್ಮ ಬೆಂಬಲಿಗರು ಅಡ್ಡಿಯುಂಟು ಮಾಡಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ  ಝಮೀರ್ ಅಹ್ಮದ್ ಖಾನ್,  ನನ್ನ ಸಿದ್ದರಾಮಯ್ಯ ಸಂಬಂಧ ಸಾಯುವವರೆಗೂ ಕೆಡುವುದಿಲ್ಲ. ಕೆಡಲು ಸಾಧ್ಯವೂ ಇಲ್ಲ. ಅಂದು ಸಿದ್ದರಾಮಯ್ಯ ಭಾಷಣಕ್ಕೆ ನಮ್ಮ ಬೆಂಬಲಿಗರು ಅಡ್ಡಿ ಮಾಡಿಲ್ಲ. ಸಿದ್ದರಾಮಯ್ಯ ಭಾಷಣ ಮೊಟಕುಗೊಳಿಸಿಲ್ಲ. ಪುನೀತ್ ರಾಜ್‌ ಕುಮಾರ್ ಕಾರ್ಯಕ್ರಮಕ್ಕೆ ಹೋಗಬೇಕಿದ್ದ ಕಾರಣ 5 ನಿಮಿಷ ಮಾತನಾಡಿ ಹೋಗಿದ್ದಾರೆ. ನನ್ನ ಅನುಪಸ್ಥಿತಿಯಲ್ಲಿ ನನ್ನ ಅಭಿಮಾನಿಗಳು ಜೈಕಾರ ಕೂಗಿದ್ದು ಕಂಡು ಸಿದ್ದರಾಮಯ್ಯ ಖುಷಿಯಾಗಿದ್ದಾರೆ. ಈ ಬಗ್ಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಸಿದ್ದರಾಮಯ್ಯ ಈ ರೀತಿ ಹೊಟ್ಟೆಕಿಚ್ವು ಪಟ್ಟುಕೊಳ್ಳುವ ಮನುಷ್ಯ ಅಲ್ಲ. ಅವರಿಗೆ ಜೊತೆಗಾರರು ಬೆಳೆದರೆ ಸಂತೋಷ ಇದೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News