ಶಿಕ್ಷಣ ತಜ್ಞರ ಅನುಭವದ ಆಧಾರದ ಮೇಲೆ ಎನ್ಇಪಿ ಜಾರಿಗೆ ತರಲಾಗಿದೆ: ರಾಜ್ಯಪಾಲ ಗೆಹ್ಲೋಟ್
ಶಿವಮೊಗ್ಗ,ನ.24: ಶಿಕ್ಷಣ ತಜ್ಞರ ಅನುಭವದ ಆಧಾರದ ಮೇಲೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ನಗರದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂಗ್ಲಿಷ್ ಭಾಷೆ ಕಲಿತರಷ್ಟೇ ನಾವು ವೈದ್ಯರಾಗುತ್ತೇವೆ, ಇಂಜಿನಿಯರ್ ಆಗುತ್ತೇವೆ ಎಂಬುದು ತಪ್ಪು ಕಲ್ಪನೆ ನಮ್ಮಲ್ಲಿದೆ.ಆದರೆ, ಇಂಗ್ಲಿಷ್ ಭಾಷೆ ಬಳಸದೇ, ಜರ್ಮನಿಯಲ್ಲಿ, ಜಪಾನ್ ನಲ್ಲಿ, ಸೇರಿದಂತೆ ಅನೇಕ ದೇಶಗಳಲ್ಲಿ ಸ್ಥಳೀಯ ಭಾಷೆಗೆ ಹೆಚ್ಚು ಒತ್ತು ನೀಡಲಾಗಿದೆ.ಹಾಗಾಗಿ ದೇಶ ಹಾಗೂ ರಾಜ್ಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗೆ ಒತ್ತು ನೀಡಲಾಗಿದೆ ಎಂದರು.
ಹಲವಾರು ಆಯಾಮಗಳಲ್ಲಿ ಯೋಚಿಸಿ, ಚಿಂತಿಸಿ, ಹಲವಾರು ಅನುಭವಸ್ತರೊಂದಿಗೆ ಚರ್ಚಿಸಿ, ಕೇಂದ್ರ ಸರ್ಕಾರ ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದೆ.ಇಡೀ ದೇಶದಲ್ಲಿ ಕರ್ನಾಟಕ ರಾಜ್ಯವೇ ಪ್ರಥಮವಾಗಿ ನೂತನ ನೀತಿ ಒಪ್ಪಿಕೊಂಡಿರುವ ರಾಜ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಪ್ರಮುಖರಾದ ಬಿ.ವೈ ಅರುಣಾದೇವಿ ಸೇರಿದಂತೆ ಹಲವರಿದ್ದರು.