×
Ad

ಬಿಟ್ ಕಾಯಿನ್ ಹಗರಣ: ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ಸಿಎಲ್‍ಪಿಯಲ್ಲಿ ಚರ್ಚಿಸಿ ತೀರ್ಮಾನ; ಅಜಯ್ ಸಿಂಗ್

Update: 2021-11-24 23:38 IST

ಬೆಂಗಳೂರು, ನ. 24: ‘ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಹೋರಾಟ ನಡೆಸುವ ಸಂಬಂಧ ಶಾಸಕಾಂಗ ಪಕ್ಷ (ಸಿಎಲ್‍ಪಿ) ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಮಾಡಲಾಗುವುದು' ಎಂದು ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ಡಾ. ಅಜಯ್ ಸಿಂಗ್ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಟ್ ಕಾಯಿನ್ ವಿಚಾರವಾಗಿ ಪಕ್ಷದ ವತಿಯಿಂದ ಒತ್ತಡ ಹಾಕುತ್ತಿದ್ದೇವೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಬೇಕು ಹಾಗೂ ಸತ್ಯಾಂಶ ಹೊರಗಡೆ ಬರಬೇಕು ಎನ್ನುವುದು ನಮ್ಮ ಬೇಡಿಕೆ' ಎಂದು ಹೇಳಿದರು.

‘ಬಿಟ್ ಕಾಯಿನ್ ವಿಚಾರವಾಗಿ ಸದನದಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂಬ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ನವೆಂಬರ್ ತಿಂಗಳಲ್ಲಿ ಎಲ್ಲ ಕಡೆ ಮಳೆ ಆಗುತ್ತಿದೆ. ಆದರೆ, ಮಳೆ ಹಾನಿ ಪ್ರದೇಶಗಳಿಗೆ ಸಚಿವರು ಯಾರೂ ಹೋಗುತ್ತಿಲ್ಲ. ಜನ ಸಂಕಷ್ಟದಲ್ಲಿ ಇರುವಾಗ ಸರಕಾರ ಏನು ಮಾಡುತ್ತಿದೆ? ಎಂದು ಅಜಯ್ ಸಿಂಗ್ ಪ್ರಶ್ನಿಸಿದರು.

‘ಕಳೆದ ಬಾರಿ ಬೆಳೆಹಾನಿಗೆ 40 ಸಾವಿರ ಕೋಟಿ ರೂ.ಪರಿಹಾರದ ಬೇಡಿಕೆ ಇಟ್ಟರೂ, ಹಣ ಬಂದಿಲ್ಲ. ಸರಕಾರ ನಿದ್ದೆ ಮಾಡುತ್ತಿದೆ, ಟೇಕಾಫ್ ಆಗಿಲ್ಲ. ಜನ ಸ್ವರಾಜ್ ಯಾತ್ರೆಗೆ ಬಿಜೆಪಿ ಮುಖಂಡರು ಒಟ್ಟಾಗಿ ಹೋಗುತ್ತಾರೆ ಮಳೆ ಹಾನಿ ಪ್ರದೇಶಕ್ಕೆ ಹೋಗುತ್ತಿಲ್ಲ. ರಾಜ್ಯದ ಜನರು 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ದಿಲ್ಲಿಗೆ ಕಳಿಸಿದ್ದು, ಡಬಲ್ ಇಂಜಿನ್ ಸರಕಾರ ಕೆಲಸ ಮಾಡುತ್ತೆ ಎಂಬ ವಿಶ್ವಾಸವಿತ್ತು. ಆದರೆ, ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲಿ ಅನುದಾನ ಕಡಿತವಾಗಿದೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News