ಜಮನ್‍ಲಾಲ್ ಬಜಾಜ್ ಸೇವಾ ಟ್ರಸ್ಟ್ ಭೂ ವಿವಾದ: ತೀರ್ಪು ಪ್ರಶ್ನಿಸಿ ಸರಕಾರದಿಂದ ಮೇಲ್ಮನವಿ
ಬೆಂಗಳೂರು, ನ.24: ಜಮನ್‍ಲಾಲ್ ಬಜಾಜ್ ಸೇವಾ ಟ್ರಸ್ಟ್ ಹೆಚ್ಚುವರಿಯಾಗಿ ಹೊಂದಿದೆ ಎನ್ನಲಾದ 354.10 ಎಕರೆ ಭೂಮಿಯನ್ನು ಸರಕಾರಕ್ಕೆ ಹಿಂದಿರುಗಿಸುವಂತೆ 2017ರಲ್ಲಿ ಭೂ ನ್ಯಾಯ ಮಂಡಳಿ ನೀಡಿದ್ದ ಆದೇಶ ರದ್ದುಪಡಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಕ್ರಮ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಕೆಯಾಗಿದೆ.
ಏಕಸದಸ್ಯ ಪೀಠದ ತೀರ್ಪು ರದ್ದುಕೋರಿ ಸರಕಾರ ಸಲ್ಲಿಸಿರುವ ಮೇಲ್ಮನವಿಯನ್ನು ವಿಚಾರಣೆ ನಡೆಸಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಪ್ರತಿವಾದಿಯಾದ ಜಮನ್‍ಲಾಲ್ ಬಜಾಜ್ ಸೇವಾ ಟ್ರಸ್ಟ್‍ಗೆ ನೋಟಿಸ್ ಜಾರಿಗೊಳಿಸಿ, ನ.29ಕ್ಕೆ ಅರ್ಜಿ ವಿಚಾರಣೆ ನಿಗದಿಪಡಿಸಿತು.
ಪ್ರಕರಣದ ಹಿನ್ನೆಲೆ: ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದ ನಂತರ ಟ್ರಸ್ಟ್ ತನ್ನ ಒಡೆತನದಲ್ಲಿರುವ ಬೆಂಗಳೂರಿನ ಹೊರವಲಯದಲ್ಲಿರುವ ಜಮೀನಿನ ವಿವರವನ್ನು 1974ರ ಡಿಸೆಂಬರ್ 31 ಮತ್ತು 1975ರ ಜನವರಿ 2ರಂದು ನಮೂನೆ 11ರ ಮೂಲಕ ಕಂದಾಯ ಇಲಾಖೆಗೆ ಸಲ್ಲಿಸಿತ್ತು. ಕಾಯ್ದೆ ಮಿತಿಗಿಂತ ಹೆಚ್ಚುವರಿ ಭೂಮಿಯನ್ನು ಟ್ರಸ್ಟ್ ಹೊಂದಿದ್ದ ಕಾರಣ, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಭೂ ನ್ಯಾಯಮಂಡಳಿ, ಟ್ರಸ್ಟ್ 213.20 ಎಕರೆ ಹೆಚ್ಚುವರಿ ಭೂಮಿ ಹೊಂದಿದ್ದು, ಅದನ್ನು ಸರಕಾರಕ್ಕೆ ಮರಳಿಸಬೇಕು ಎಂದು 2010ರಲ್ಲಿ ಆದೇಶ ನೀಡಿತ್ತು.
ನ್ಯಾಯಮಂಡಳಿಯ ಈ ಆದೇಶ ಪ್ರಶ್ನಿಸಿ ಟ್ರಸ್ಟ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್, ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಭೂ ನ್ಯಾಯಮಂಡಳಿಯೇ ಪ್ರಕರಣವನ್ನು ಪುನರ್ ಪರಿಶೀಲಿಸಿ, ನಿರ್ಧರಿಸಬೇಕು ಎಂದು 2014ರ ಮಾರ್ಚ್ 3ರಂದು ಆದೇಶ ಹೊರಡಿಸಿತ್ತು. ಅದರಂತೆ ಉಪವಿಭಾಗಾಧಿಕಾರಿ ಅವರನ್ನೊಳಗೊಂಡ ಭೂ ನ್ಯಾಯಮಂಡಳಿ ವಿಚಾರಣೆ ನಡೆಸಿ, ಭೂಸುಧಾರಣಾ ಕಾಯ್ದೆಯ ಮಿತಿಗಿಂತ ಟ್ರಸ್ಟ್ ಹೆಚ್ಚುವರಿಯಾಗಿ 354 ಎಕರೆ ಭೂಮಿ ಹೊಂದಿದೆ. ಹೀಗಾಗಿ, ಅದನ್ನು ಸರಕಾರ ವಶಕ್ಕೆ ಪಡೆಯಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್ ಮತ್ತೆ ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ಭೂ ನ್ಯಾಯಮಂಡಳಿಯ ಆದೇಶವನ್ನು ರದ್ದುಗೊಳಿಸಿ, ಹೆಚ್ಚುವರಿ ಭೂಮಿ ಕೃಷಿ ಭೂಮಿಯಲ್ಲ. ಹೀಗಾಗಿ, ಸರಕಾರ ವಶಪಡಿಸಿಕೊಂಡಿರುವ ಭೂಮಿಯನ್ನು ಟ್ರಸ್ಟ್ ಗೆ ಬಿಟ್ಟುಕೊಡಬೇಕೆಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸರಕಾರ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದೆ.