×
Ad

ಎಸಿಬಿ ದಾಳಿ: ಜೇವರ್ಗಿಯ ಪಿಡಬ್ಲ್ಯುಡಿ ಕಿರಿಯ ಇಂಜಿನಿಯರ್ ನ ಬಂಧನ

Update: 2021-11-25 11:44 IST
ಎಸ್.ಎಂ.ಬಿರಾದಾರ್

ಕಲಬುರಗಿ, ನ.25: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪಿತ ರಾಜ್ಯ ಸರಕಾರದ ವಿವಿಧ ಇಲಾಖೆಗಳ 15 ಸರಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸುವ ಮೂಲಕ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬುಧವಾರ ಶಾಕ್ ನೀಡಿತ್ತು. ಈ ದಾಳಿ ವೇಳೆ ಪರಿಶೋಧನೆಗೆ ಸಹಕರಿಸದ ಕಲಬುರಗಿ ಜಿಲ್ಲೆ ಜೇವರ್ಗಿಯ ಪಿಡಬ್ಲ್ಯುಡಿ ಕಿರಿಯ ಇಂಜಿನಿಯರ್ ಎಸ್.ಎಂ.ಬಿರಾದಾರ್ ಅವರನ್ನು ಎಸಿಬಿ ಬಂಧಿಸಿದೆ

 ಕಲಬುರಗಿಯ ಗುಬ್ಬಿ ಕಾಲನಿಯಲ್ಲಿರುವ ಬಿರಾದರ್ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದಾಗ ಮನೆಯ ಹೊರಭಾಗದಲ್ಲಿದ್ದ ಪಿಯುಸಿ ಪೈಪ್‌ ವೊಂದರಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿತ್ತು. ಬೆಳಗಿನ ಜಾವ ಎಸಿಬಿ ಅಧಿಕಾರಿಗಳು ಬಿರಾದಾರ್ ಮನೆಯ ಮೇಲೆ ದಾಳಿ ನಡೆಸಿದಾಗ ಶಾಂತಗೌಡ 10ರಿಂದ 15 ನಿಮಿಷಗಳ ಬಾಗಿಲು ತೆರೆಯದೆ ಸತಾಯಿಸಿದ್ದರು. ಈ ವೇಳೆ ಅವರು ಪೈಪ್‌ನೊಳಗೆ ಹಣ, ಚಿನ್ನಾಭರಣವನ್ನು ಬಚ್ಚಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಿತಿಗಿಂತ ಅಧಿಕ ಪ್ರಮಾಣದ ಹಣ ಪತ್ತೆ ಹಾಗೂ ಪರಿಶೋಧನೆಗೆ ಎಸಿಬಿ ಜೊತೆ ಸಹಕರಿಸದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಎಸ್.ಎಂ.ಬಿರಾದಾರ್ ಅವರನ್ನು ಕಳೆದ ರಾತ್ರಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜೈಲು ಸೇರುತ್ತಿದ್ದಂತೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಬಿರಾದಾರ್ ಅವರನ್ನು ಜಿಮ್ಸ್ ಆಸ್ಪತ್ರೆಯ ಜೈಲು ವಾರ್ಡ್ ಗೆ ಸೇರಿಸಲಾಗಿದೆ.

ಲೋಕೋಪಯೋಗಿ ಇಲಾಖೆಯ ಜೇವರ್ಗಿ ಉಪ ವಿಭಾಗದಲ್ಲಿ 11 ವರ್ಷಗಳಿಂದ ಕಿರಿಯ ಎಂಜಿನಿಯರ್‌ ಹುದ್ದೆಯಲ್ಲಿರುವ ಶಾಂತಗೌಡ ಬಿರಾದಾರ ಯಡ್ರಾಮಿ ತಾಲ್ಲೂಕಿನ ಹಂಗರಗಾ (ಬಿ) ಗ್ರಾಮದವರು. ಕಳೆದ ದಿನ ಎಸಿಬಿ ಅಧಿಕಾರಿಗಳು ಬಿರಾದರ್ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಕಲಬುರಗಿಯಲ್ಲಿ 2 ಮನೆ, ಬೆಂಗಳೂರಿನಲ್ಲಿ 1 ನಿವೇಶನ, 3 ಕಾರುಗಳು, ಬೈಕ್, ಸ್ಕೂಲ್ ಬಸ್, 2 ಟ್ರಾಕ್ಟರ್, 54.50 ಲಕ್ಷ ರೂ. ನಗದು, ಚಿನ್ನಾಭರಣ, 36 ಎಕರೆ ಕೃಷಿ ಜಮೀನು, 15 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News