ಬಿಜೆಪಿಗೆ ಬೆಂಬಲ ನೀಡುವಂತೆ ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿದ್ದೇನೆ: ಬಿ.ಎಸ್. ಯಡಿಯೂರಪ್ಪ

Update: 2021-11-25 11:18 GMT
ಫೈಲ್ ಚಿತ್ರ

ಶಿವಮೊಗ್ಗ, ನ.25: 'ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಕುಮಾರಸ್ವಾಮಿಯವರಲ್ಲಿ ನಾನು ಮನವಿ ಮಾಡಿಕೊಂಡಿದ್ದೇನೆ' ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆಯ 25 ಕ್ಷೇತ್ರಗಳಲ್ಲಿ 20 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಿದ್ದು, 15 ಅಭ್ಯರ್ಥಿಗಳು ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ  ಹೇಳಿದರು.

ಶಿವಮೊಗ್ಗದ ಅಭ್ಯರ್ಥಿ ಡಿ.ಎಸ್. ಅರುಣ್ ನೂರಕ್ಕೆ ನೂರು ಗೆಲ್ಲುತ್ತಾರೆ. ಇದರಿಂದ ವಿಧಾನಪರಿಷತ್ ನಲ್ಲಿ ನಮಗೆ ಬಹುಮತ ಸಿಕ್ಕಂತಾಗುತ್ತದೆ. ಇದರಿಂದ ನಾವು ಇನ್ನೊಬ್ಬರ ಮೇಲೆ ಅವಲಂಬಿತರಾಗುವುದು ತಪ್ಪಿದಂತಾಗುತ್ತದೆ ಎಂದರು.

ಕಾಂಗ್ರೆಸ್ ನ ಸ್ನೇಹಿತರು ಕೇವಲ ಟೀಕೆ ಮಾಡಿಕೊಂಡು ಹೊರಟಿದ್ದಾರೆ. ಚುನಾವಣಾ ಫಲಿತಾಂಶ ಬಂದ ಬಳಿಕ, ಅವರಿಗೆ ವಾಸ್ತವ ಸ್ಥಿತಿ ಅರಿವಾಗುತ್ತದೆ. ಅಲ್ಲಿವರೆಗೆ ನಾನೇನು ಮಾತನಾಡುವುದಿಲ್ಲ. ಜನರೇ ಅವರಿಗೆ ತಕ್ಕ ಬುದ್ದಿ ಕಲಿಸುತ್ತಾರೆ. ಬೆಲೆ ಏರಿಕೆ ಈ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು. 

ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಮಾಡಲಾಗಿದೆ. ನನ್ನ ಅವಧಿಯಲ್ಲಾದ ಕೆಲಸ ಮತ್ತು ಬೊಮ್ಮಾಯಿವರ ಒಳ್ಳೆಯ ಕೆಲಸ ಜನರ ಗಮನ ಸೆಳೆದಿದೆ. ಪೆನ್ಷನ್ ಶೇ. 50 ರಷ್ಟು ನಮ್ಮ ಆದಾಯದಲ್ಲಿ ಖರ್ಚು ಮಾಡುತ್ತಿದ್ದೇವೆ. ವೃದ್ಯಾಪ್ಯ ಮತ್ತು ವಿಧವಾ ವೇತನವನ್ನು 200 ರೂ. ಏರಿಕೆ ಮಾಡಲಾಗಿದೆ. ನಾವು ಕಡು ಬಡವರ ಪರವಾಗಿರುವ ಸರ್ಕಾರ ಎಂಬುದು ಜನರಲ್ಲಿ ಮನವರಿಕೆಯಾಗಿದೆ. ಹೀಗಾಗಿ ಈ ಚುನಾವಣೆ ಬಹಳ ದೊಡ್ಡ ಅಂತರದಿಂದ ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News