ವೈಯಕ್ತಿಕ ಆರೋಪ ಮಾಡಿದ್ದ ಗಣೇಶ್ ಕಾರ್ಣಿಕ್‍ಗೆ ಲೀಗಲ್ ನೋಟಿಸ್ ನೀಡಿದ್ದೇನೆ: ಪ್ರಿಯಾಂಕ್ ಖರ್ಗೆ

Update: 2021-11-25 12:51 GMT

ಬೆಂಗಳೂರು, ನ. 25: ‘ತನ್ನ ವಿರುದ್ಧ ವೈಯಕ್ತಿಕ ಆರೋಪ ಮಾಡಿದ್ದ ರಾಜ್ಯ ಬಿಜೆಪಿಯ ಮುಖ್ಯ ವಕ್ತಾರ ಗಣೇಶ್ ಕಾರ್ಣಿಕ್‍ಗೆ ಲೀಗಲ್ ನೋಟಿಸ್ ನೀಡಿದ್ದು, ಅವರು ನೋಟಿಸ್‍ಗೆ ಏನು ಉತ್ತರ ಕೊಡುತ್ತಾರೆ ನೋಡೋಣ' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಟ್ ಕಾಯಿನ್ ಪ್ರಕರಣ ಸಂಬಂಧ ನಾನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದೆ. ನಾನು ಕೇಳಿದ ಸರಳ ಪ್ರಶ್ನೆಗಳಿಗೆ ಬಿಜೆಪಿ ಉತ್ತರ ನೀಡಲಿಲ್ಲ. ಆದರೆ, ತನ್ನ ಮತ್ತು ತನ್ನ ಕುಟುಂಬದ ಸದಸ್ಯರ ಅಕ್ರಮ ಆಸ್ತಿ, ವೈಯಕ್ತಿಕ ವಿಚಾರ ಕೆದಕಿದರು. ಅದಕ್ಕೆ ಲೀಗಲ್ ನೋಟಿಸ್ ನೀಡಿದ್ದೇವೆ' ಎಂದು ತಿಳಿಸಿದರು.

ಬಿಟ್ ಕಾಯಿನ್ ಪ್ರಕರಣ ಸಂಬಂಧ ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ಯಾವುದೇ ವೇದಿಕೆಯಾದರೂ ಚರ್ಚೆಗೆ ನಾವು ಸಿದ್ಧ. ಆದರೆ ಬಿಜೆಪಿ ಮುಖಂಡರು ಹಸಿ ಸುಳ್ಳು ಹೇಳುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಬ್ಯಾನ್ ಸರಿಯಲ್ಲ: ಕ್ರಿಪ್ಟೋ ಕರೆನ್ಸಿ ಬ್ಯಾನ್ ಮಾಡಬೇಕು ಎಂಬ ಚರ್ಚೆ ಆರಂಭವಾಗಿದೆ. ನಾನು ಈ ಬಗ್ಗೆ ಇನ್ನೂ ಮಾಹಿತಿ ಪಡೆಯುತ್ತಿದ್ದೇನೆ. ಪ್ರೈವೇಟ್ ಬಿಟ್ ಕಾಯಿನ್ ನಿಷೇಧಿಸಿದರೆ ಒಳ್ಳೆಯದೆ. ಆದರೆ ಬಿಟ್ ಕಾಯಿನ್ ನಿಷೇಧ ಮಾಡುವುದು ಕಷ್ಟವಾಗುತ್ತದೆ. ಈ ವಿಚಾರದ ಬಗ್ಗೆ ಜನರಲ್ಲಿ ಸ್ವಲ್ಪ ಗೊಂದಲವಿದೆ ಎಂದು ಅವರು ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News