ಚಿಕ್ಕಮಗಳೂರು: ಕಟ್ಟಡ ನಿರ್ಮಾಣ ವೆಚ್ಚದ ಶೇ.1ರಷ್ಟು ಸುಂಕ ಪಾವತಿ ಕಡ್ಡಾಯ; ಜಿಲ್ಲಾಧಿಕಾರಿ

Update: 2021-11-25 12:37 GMT

ಚಿಕ್ಕಮಗಳೂರು, ನ.25: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ 1996ರ ಕಾಯ್ದೆ ಅಡಿಯಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಕಟ್ಟಡ ನಿರ್ಮಾಣ ವೆಚ್ಚದ ಶೇ.1ರಷ್ಟು ಸುಂಕವನ್ನು ಕಡ್ಡಾಯವಾಗಿ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಥವಾ ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆಗಳು ತಮ್ಮ ಶುಲ್ಕದೊಂದಿಗೆ ಕಾರ್ಮಿಕ ಕಲ್ಯಾಣ ಸುಂಕವನ್ನೂ ಸಂಗ್ರಹಿಸಬೇಕು. ಆಯಾ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ತಾವು ಸಂಗ್ರಹಿಸಿದ ಕಾರ್ಮಿಕ ಕಲ್ಯಾಣ ಸುಂಕವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಖಾತೆಗೆ ಜಮೆ ಮಾಡಬೇಕು ಎಂದರು.

ಯಾವುದೇ ಕಾರಣಕ್ಕೂ ಈ ಸುಂಕವನ್ನು ಬೇರೆ ಉದ್ದೇಶಕ್ಕೆ ಬಳಸಲು ಸ್ಥಳೀಯ ಸಂಸ್ಥೆಗಳಿಗೆ ಅವಕಾಶವಿಲ್ಲ, ಇದು ಕಾನೂನಿನ ಉಲ್ಲಂಘನೆಯಾಗಲಿದೆ. ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯತ್‍ಗಳು ತಾವು ಸಂಗ್ರಹಿಸಿರುವ ಎಲ್ಲ ಕಾರ್ಮಿಕ ಕಲ್ಯಾಣ ಸುಂಕವನ್ನು ಕೂಡಲೇ ಮಂಡಳಿಗೆ ಜಮೆ ಮಾಡಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.

ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜ್ ಮಾತನಾಡಿ, ಕಾರ್ಮಿಕ ಕಲ್ಯಾಣ ಸುಂಕವನ್ನು ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ನೀಡಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ವೆಚ್ಚ ಮಾಡುತ್ತಿದೆ. ಮಂಡಳಿಯಲ್ಲಿ ರಾಜ್ಯದ 30 ಲಕ್ಷಕ್ಕೂ ಅಧಿಕ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದು, ಕೋವಿಡ್ ಸಂದರ್ಭದಲ್ಲಿ ಮಂಡಳಿಯಿಂದ ಕಾರ್ಮಿಕರಿಗೆ ಹೆಚ್ಚಿನ ನೆರವು ನೀಡಲಾಗಿದೆ ಎಂದರು.

ಗ್ರಾಪಂ, ಪಪಂ, ಪುರಸಭೆ, ನಗರಸಭೆಗಳು ತಾವು ಸಂಗ್ರಹಿಸಿದ ಕಾರ್ಮಿಕ ಕಲ್ಯಾಣ ಸುಂಕವನ್ನು ಬೇರೆ ಉದ್ದೇಶಕ್ಕೆ ಬಳಸಿರುವ ಬಗ್ಗೆ ಮಹಾಲೇಖಪಾಲರಿಂದ ಆಕ್ಷೇಪಣೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಈ ಸುಂಕವನ್ನು ಮಂಡಳಿಯ ಖಾತೆಗೆ ಜಮೆ ಮಾಡಬೇಕು ಎಂದ ಅವರು, ಕಟ್ಟಡ, ರಸ್ತೆ ನಿರ್ಮಾಣ, ನೀರಾವರಿ, ಒಳಚರಂಡಿ, ವಿದ್ಯುತ್, ಅಣೆಕಟ್ಟು, ಕಾಲುವೆ ಇತ್ಯಾದಿಗಳ ನಿರ್ಮಾಣ, ದುರಸ್ತಿ ಕಾಮಗಾರಿ ಸೇರಿದಂತೆ ಒಟ್ಟು 67 ನಿರ್ಮಾಣ ಚಟುವಟಿಕೆಗಳನ್ನು ಕಾರ್ಮಿಕ ಕಲ್ಯಾಣ ಸುಂಕ ಪಾವತಿಗೆ ಗುರುತಿಸಲಾಗಿದೆ ಎಂದು ಅವರು ತಿಳಿಸಿದರು. 

ಸಭೆಯಲ್ಲಿ ಕಾರ್ಮಿಕ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News