×
Ad

ಎಸಿಬಿ ದಾಳಿ: 15 ಅಧಿಕಾರಿಗಳ ಬಳಿ 72 ಕೋಟಿ ಮೌಲ್ಯದ ಅಕ್ರಮ ಆಸ್ತಿ!

Update: 2021-11-25 18:48 IST

ಬೆಂಗಳೂರು, ನ.25: ಆದಾಯಕ್ಕಿಂತ ಆಸ್ತಿ ಸಂಪಾದನೆ ಆರೋಪ ಸಂಬಂಧ ರಾಜ್ಯದೆಲ್ಲೆಡೆ 15 ಸರಕಾರಿ ಅಧಿಕಾರಿಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ತನಿಖಾಧಿಕಾರಿಗಳು ನಡೆಸಿದ ದಾಳಿ ಸಂದರ್ಭದಲ್ಲಿ ಬರೋಬ್ಬರಿ ಒಟ್ಟು 72 ಕೋಟಿಗೂ ಅಧಿಕ ಮೌಲ್ಯದ ಅಕ್ರಮ  ಆಸ್ತಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ದಾಳಿಗೆ ಗುರಿಯಾದ ಸರಕಾರಿ ಅಧಿಕಾರಿಗಳ ಪೈಕಿ, ಬೆಂಗಳೂರಿನ ನಿರ್ಮಿತಿ ಕೇಂದ್ರದ ನಿವೃತ್ತ ಯೋಜನಾ ನಿರ್ದೇಶಕ ಆರ್.ಎನ್. ವಾಸುದೇವ್ ಬಳಿ ಅತಿ ಹೆಚ್ಚು ಅಕ್ರಮ ಸಂಪತ್ತು ಪತ್ತೆಯಾಗಿದ್ದು, ಒಟ್ಟು 18.20 ಕೋಟಿ ಮೌಲ್ಯವಿದೆ ಎಂದು ಗೊತ್ತಾಗಿದೆ. ಇದು ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ.879.53 ರಷ್ಟು ಹೆಚ್ಚಿನ ಅಕ್ರಮ ಆಸ್ತಿಯಾಗಿದೆ ಎಂದು ಎಸಿಬಿ ಗುರುತಿಸಿದೆ.

ಸಕಾಲ ಮಷಿನ್ ಆಡಳಿತಾಧಿಕಾರಿ ಎಲ್.ಸಿ.ನಾಗರಾಜ್ ಅವರ ನಿವಾಸದ ದಾಳಿಯ ವೇಳೆ ಚಿನ್ನಾಭರಣ, ನಗದು, ಇನ್ನಿತರೆ ಆಸ್ತಿ ಸೇರಿದಂತೆ ಒಟ್ಟು 10.82 ಕೋಟಿ ರೂ. ಅಕ್ರಮ ಸಂಪತ್ತು ಪತ್ತೆಯಾಗಿದ್ದು, ಆದಾಯಕ್ಕಿಂತ ಸುಮಾರು ಶೇ.198 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಹೊಂದಿರುವುದಾಗಿ ಹೇಳಲಾಗುತ್ತಿದೆ.

ಬಿಬಿಎಂಪಿಯ ಶಾಲೆವೊಂದರಡಿ ಗ್ರೂಪ್ ನೌಕರನ ಜಿ.ವಿ.ಗಿರಿ ಬಳಿ ಬರೋಬ್ಬರಿ 6.24 ಕೋಟಿ ರೂ. ಮೌಲ್ಯದ ಸಂಪತ್ತು ಪತ್ತೆಯಾಗಿರುವುದು ಎಸಿಬಿ ತನಿಖಾಧಿಕಾರಗಳು ಅಚ್ಚರಿಗೆ ಗುರಿಯಾಗಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ.

ಅದೇ ರೀತಿ, ನೀರನ ಪೈಪ್‍ನಲ್ಲಿ ಹಣ ಹಾಕಿದ್ದ ಕಲಬುರ್ಗಿಯ ಜೇವರ್ಗಿ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ ಎಸ್.ಎಂ.ಬಿರಾದರ್ ನಿವಾಸದ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 4.15 ಕೋಟಿ ರೂ. ಮೌಲ್ಯದ ಸಂಪತ್ತು ಬೆಳಕಿಗೆ ಬಂದಿದೆ. ಈತ ತನ್ನ ಆದಾಯಕ್ಕಿಂತ ಶೇ.406.17ರಷ್ಟು ಆಸ್ತಿ ಹೊಂದಿರುವುದಾಗಿ ಎಸಿಬಿ ಹೇಳಿದೆ.

ಗದಗ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಬಳಿ 6.65 ಕೋಟಿ ರೂ. ಸಂಪತ್ತು, ಕೆಆರ್ ಪೇಟೆಯ ಸಬ್‍ಡಿವಿಜನ್ ಎಚ್‍ಎಲ್‍ಬಿಸಿ-3 ಕಾರ್ಯಪಾಲಕ ಅಭಿಯಂತರ ಕೆ.ಶ್ರೀನಿವಾಸ್ ಬಳಿ 3.10 ಕೋಟಿ ರೂ., ಮಂಗಳೂರಿನ ಸ್ಮಾರ್ಟ್ ಸಿಟಿ ಕಾರ್ಯಪಾಲಕ ಅಭಿಯಂತರ ಕೆ.ಎಸ್.ಲಿಂಗೇಗೌಡ, ಬಳಿ 2.03 ಕೋಟಿ ರೂ. ಸಂಪತ್ತಿನ ದಾಖಲೆ ಪತ್ರಗಳು ಪತ್ತೆಯಾಗಿವೆ.

ಯಲಹಂಕದ ಸರಕಾರಿ ಆಸ್ಪತ್ರೆಯ ಪಿಸಿಯೋಥೆರಪಿಸ್ಟ್ ಎಸ್.ಎಸ್.ರಾಜಶೇಖರ್ ಬಳಿ 1.40 ಕೋಟಿ ರೂ., ಮೌಲ್ಯದ ಚಿನ್ನಾಭರಣ, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ ಸೇರಿದಂತೆ ಇನ್ನಿತರೆ ದಾಖಲೆ ಜಪ್ತಿ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಮಾಜಿ ಅಧ್ಯಕ್ಷ, ಬಿಬಿಎಂಪಿ ಪ್ರಥಮದರ್ಜೆ ಸಹಾಯಕ ಮಾಯಣ್ಣ ಬಳಿ 4.92 ಕೋಟಿ ರೂ.,ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿಯ ದಾಖಲೆ ಪತ್ರ ಸಿಕ್ಕಿದ್ದು, ಇವರ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ.138 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿದೆ.

ಇಲ್ಲಿನ ಬಳ್ಳಾರಿ ಜಿಲ್ಲೆಯ ನಿವೃತ್ತ ಸಬ್‍ರಿಜಿಸ್ಟ್ರಾರ್ ಕೆ.ಎಸ್.ಶಿವಾನಂದ್ ಅವರ ಬಳಿ 1.37 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಹಾಗೇ, ಗೋಕಾಕ್ ಹಿರಿಯ ಮೋಟಾರು ನಿರೀಕ್ಷಕ ಸದಾಶಿವ ರಾಯಪ್ಪ ಮರಲಿಂಗಣ್ಣನವರ್ ಬಳಿ 3.05 ಕೋಟಿ ರೂ., ರಾಯಬಾಗ್ ತಾಲೂಕಿನ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಅಡವಿ ಸಿದ್ದೇಶ್ವರ ಕಾರೆಪ್ಪ ಮಸ್ತಿ ಬಳಿ 1.74 ಕೋಟಿ ರೂ. ಬೆಳಗಾವಿಯ ಹೆಸ್ಕಾಂ ಲೈನ್ ಮೈಕಾನಿಕ್ ಗ್ರೇಡ್-2 ನಾಥಾಜಿ ಪೀರಾಜಿ ಪಾಟೀಲ ಬಳಿ 2.20 ಕೋಟಿ ರೂ., ಆಸ್ತಿ ಪತ್ತೆಯಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಕಸಬಾ-2 ರಾಜಸ್ವ ನಿರೀಕ್ಷಕ ಲಕ್ಷ್ಮೀನರಸಿಂಹಯ್ಯ ಬಳಿ 1.83 ಕೋಟಿ ರೂ., ನಂದಿನಿ ಹಾಲು ಉತ್ಪನ್ನಗಳ ಪ್ರಧಾನ ವ್ಯವಸ್ಥಾಪಕ ಬಿ.ಕೃಷ್ಣಾರೆಡ್ಡಿ ಬಳಿ 4.83 ಕೋಟಿ ರೂ. ಆಸ್ತಿ ಪತ್ತೆಯಾಗಿದ್ದು, ಈ ಸಂಬಂಧ ಎಲ್ಲ ಅಧಿಕಾರಿಗಳಿಗೂ ವಿಚಾರಣೆಗೆ ಹಾಜರಾಗಿ, ಲಿಖಿತರೂಪದಲ್ಲಿ ಉತ್ತರಿಸುವಂತೆ ಸೂಚನೆ ನೀಡಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪ ಸಂಬಂಧ ವಿವಿಧ ಇಲಾಖೆಗಳ 15 ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಒಟ್ಟು 68 ಸ್ಥಳಗಳ ಮೇಲೆ ಎಸಿಬಿಯ 500ಕ್ಕೂ ಹೆಚ್ಚಿನ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಶೋಧಕಾರ್ಯ ಕೈಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News