'ಕಾಂಗ್ರೆಸ್‍ಗೆ ಮತ ನೀಡಿದ್ರೆ, ಕಸದ ಬುಟ್ಟಿಗೆ ಹಾಕಿದಂತೆ': ಸಚಿವ ಆನಂದ್ ಸಿಂಗ್

Update: 2021-11-25 14:07 GMT

ಬಳ್ಳಾರಿ ನ.25: ‘ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ನೆಲೆ ಇಲ್ಲವಾಗಿದ್ದು, ಆ ಪಕ್ಷಕ್ಕೆ ನಾಯಕರೇ ಇಲ್ಲದ ದಯನೀಯ ಪರಿಸ್ಥಿತಿ ಉಂಟಾಗಿದೆ' ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಟೀಕಿಸಿದ್ದಾರೆ.

ಗುರುವಾರ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಾಂಗ್ರೆಸ್‍ನಲ್ಲಿ ದೇಶವನ್ನು ಮುನ್ನಡೆಸುವಂತಹ ನಾಯಕರಿಲ್ಲ. ‘ಯಜಮಾನ’ನಿಲ್ಲದ ಸ್ಥಿತಿ ಕಾಂಗ್ರೆಸ್‍ನದ್ದು. ರಾಹುಲ್ ಗಾಂಧಿ ಅಧ್ಯಕ್ಷ ಹುದ್ದೆ ಒಲ್ಲೆ ಎನ್ನುತ್ತಾರೆ. ಆ ಪಕ್ಷದಲ್ಲಿ ನಾಯಕರಿಲ್ಲದ ಕಾರಣ ರಾಹುಲ್ ಅವರನ್ನು ಬಲವಂತವಾಗಿ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಪಕ್ಷದದಿಂದ ಜನ ಯಾವುದೇ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದು ಛೇಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಯಾವುದೇ ವಿಷಯ ಸಿಗದ ಕಾರಣ ಅಲ್ಪಸಂಖ್ಯಾತ ಸಮುದಾಯದ ಹೆಸರು ಹೇಳಿ ‘ವೋಟ್ ಬ್ಯಾಂಕ್’ ರಾಜಕಾರಣವನ್ನು ಮುಂದುವರೆಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದವರಿಗೆ ಕಾಂಗ್ರೆಸ್‍ನ ನಿಜ ಬಣ್ಣ ಈಗ ಗೊತ್ತಾಗುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‍ಗೆ ಏನಾದರೂ ಮತ ಹಾಕಿದರೆ ಅದು ‘ಕಸದ ಬುಟ್ಟಿಗೆ’ ಹಾಕಿದಂತೆ. ದೇಶದಲ್ಲಿ ಕಾಂಗ್ರೆಸ್ ಮುಳುಗಿದ ಹಡಗಿನಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್‍ನವರು ಜನರ ಬಳಿ ಬರುತ್ತಾರೆ. ಜನತೆ ಬುದ್ಧಿವಂತರಿದ್ದು, ಪರಿಷತ್ ಚುನಾವಣೆಯಲ್ಲೂ ತಕ್ಕ ಪಾಠ ಕಲಿಸಲಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಈ ಬಾರಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಆನಂದ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ಇಡೀ ದೇಶ ಅಭಿವೃದ್ಧಿ ಕಾಣುತ್ತಿದೆ. ಬಿಜೆಪಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿ ಚುನಾವಣೆಗೆ ಹೋದ ಪಕ್ಷ ಬಿಜೆಪಿ. ಆದರೆ ಕಾಂಗ್ರೆಸ್‍ಗೆ ಅಧ್ಯಕ್ಷರೇ ಇಲ್ಲದ ಪರಿಸ್ಥಿತಿ ಇದೆ ಎಂದು ಹೇಳಿದರು. ಈ ವೇಳೆ ಪಕ್ಷದ ಅಭ್ಯರ್ಥಿ ವೈ.ಎಂ.ಸತೀಶ್, ಸಾರಿಗೆ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕ ಸುರೇಶ್ ಬಾಬು, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ತಿಮ್ಮರೆಡ್ಡಿ, ಬುಡಾ ಮಾಜಿ ಅಧ್ಯಕ್ಷ ರಾಮಲಿಂಗಪ್ಪ, ಕಂಪ್ಲಿ ಮಂಡಲ ಅಧ್ಯಕ್ಷ ವಿರೇಶ್ ಗೌಡ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News