ನ.26ರಂದು ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿ ಬಂದ್: ಕುರುಬೂರು ಶಾಂತಕುಮಾರ್

Update: 2021-11-26 06:22 GMT

ಮೈಸೂರು,ನ25: ಕೃಷಿ ಉತ್ಪನ್ನಗಳಿಗೆ ಶಾಸನ ಬದ್ಧ ಖಾತರಿ ಕನಿಷ್ಠ ಬೆಂಬಲ ಬೆಲೆ ನಿಗದಿ ಜಾರಿಗೆ ಒತ್ತಾಯಿಸಿ ನ.26 ರ ಶುಕ್ರವಾರ ದಂದು ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ತಿಳಿಸಿದೆ.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ,  ಕಬ್ಬಿನ ಎಫ್.ಆರ್.ಪಿ ದರ ಪುನರ್ ಪರಿಶೀಲನೆಯಾಗಬೇಕು, ಕಬ್ಬು ಕಟಾವು ಸಾಗಣಿಕೆ ವೆಚ್ಚ ಕಾರ್ಖಾನೆಯವರೆ ಭರಿಸಬೇಕು, ಎಲ್ಲಾ ತಳಿ ಭತ್ತಗಳನ್ನು ಖರೀದಿ ಕೇಂದ್ರದಲ್ಲಿ ಖರೀದಿಸುವಂತಾಗಬೇಕು ಎಂದು ಆಗ್ರಹಿಸಿದರು.

ದೆಹಲಿ ರೈತರ ಚಾರಿತ್ರಿಕ ಹೋರಾಟದಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯತನದಿಂದ ಚಳಿ,ಗಾಳಿ,ಮಳೆ ಲೆಕ್ಕಿಸದೆ ಹೋರಾಟ ಮಾಡಿ ತಮ್ಮ ಪ್ರಾಣ ಬಲಿದಾನ ಮಾಡಿದ ರೈತರ ಕುಟುಂಬಗಳಿಗೆ ತಲಾ 25 ಲಕ್ಷರೂಪಾಯಿ ಪರಿಹಾರ ನೀಡಬೇಕು. ತೆಲಂಗಾಣ ಸರ್ಕಾರವೇ ಎಲ್ಲಾ 700 ರೈತ ಕುಟುಂಬಗಳಿಗೆ ಮೂರು ಲಕ್ಷ ರೂಪಾಯಿಯಂತೆ 22 ಕೋಟಿ ರೂ. ಬಿಡುಗಡೆ ಮಾಡಿದೆ. ಈಗಲಾದರೂ ಪ್ರಧಾನಿಗಳು ಎಚ್ಚೆತ್ತಕೊಂಡು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

2022 ಕ್ಕೆ ರೈತರ ಆಧಾಯ ದ್ವಿಗುಣ ಮಾಡುತ್ತೇವೆ ಎನ್ನುವ ಪ್ರಧಾನಿಗಳು ಈಗ ರೈತರಿಗೆ ತಿಂಗಳಿಗೆ 3700 ಕೂಲಿ ಕಾರ್ಮಿಕರಿಗೆ 4100 ಆಧಾಯ ಬರುವಂತ ಸ್ಥತಿಗೆ ತಳ್ಳಿದ್ದಾರೆ. ಆದ್ದರಿಂದ ರೈತರಿಗೆ ಬೇಕಾದ ಎಂ.ಎಸ್.ಪಿ ಖಾತ್ರಿ ಕಾನೂನು ಜಾರಿ ಮಾಡಲಿ ಎಂದು ಹೇಳಿದರು.

ರಾಜ್ಯದಲ್ಲಿ 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ರಾಗಿ, ಜೋಳ, ತೋಟಗಾರಿಕೆ ತರಕಾರಿ ಬೆಳೆಗಳು ಹಾಳಾಗಿವೆ ಎಂದು ಅಂದಾಜಿಸಲಾಗಿದೆ. ಮಳೆಹಾನಿ ಪ್ರವಾಹ  ಅತಿವೃಷ್ಟಿ ಬೆಳೆ ನಷ್ಟ ಪರಿಹಾರವನ್ನು ವೈಜ್ಞಾನಿಕವಾಗಿ ಸಮೀಕ್ಷೆ ಅಂದಾಜು ಮಾಡಿ ಸಂಪೂರ್ಣ ನಷ್ಟವನ್ನು ಬರಿಸುವಂತಾಗಬೇಕು ಅನಿವಾರ್ಯವಾದರೆ ಇಂಥ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಕೃಷಿ ಬೆಲೆ ಆಯೋಗ ಅಧ್ಯಕ್ಷರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿನ ಸಂಚಾರಿ ಖರೀದಿ ಕೇಂದ್ರದ ಆರಂಭ, ಪಡಿತರ ವಿತರಣೆಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಿದ ಭತ್ತ, ರಾಗಿ, ಜೋಳ ವಿತರಣೆಗೆಕ್ರಮ, ಸಿರಿಧಾನ್ಯಗಳಿಗೆ ಉತ್ಪಾದನಾ ವೆಚ್ಚಕ್ಕೆ ಲಾಭ ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಮತ್ತು ಎಲ್ಲಾ ರೀತಿಯ ಕೃಷಿ ಬೆಳೆಗಳಿಗೆ ಕೃಷಿ ಭೀಮಾ ಯೋಜನೆ ಅಳವಡಿಸಬೇಕು ಎನ್ನುವ ವರದಿಯನ್ನು ಸರ್ಕಾರ ಕೂಡಲೇ ಜಾರಿಗೆ ತರಬೇಕು ಎಂದು ಮನವಿ ಮಾಡಿದರು.

ಡಿಸೆಂಬರ್ ನಲ್ಲಿ ವಿಶ್ವ ರೈತ ದಿನಾಚರಣೆ ಅಂಗವಾಗಿ ಡಿಸೆಂಬರ್ 26 ರಂದು ಮೈಸೂರಿನಲ್ಲಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರುಗಳಾದ ಅತ್ತಹಳ್ಳಿ ದೇವರಾಜ್, ಕಿರಗಸೂರು ಶಂಕರ್, ಬರಡನಪುರ ನಾಗರಾಜ್, ಗಳಿಗರಹುಂಡಿ ವೆಂಕಟೇಶ್,  ಶಿವರುದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News