ಗುತ್ತಿಗೆದಾರರ ಶೇ. 40 ಕಮಿಷನ್ ಆರೋಪ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ; ಸಿಎಂ ಬೊಮ್ಮಾಯಿ

Update: 2021-11-25 15:07 GMT

 ಬೆಂಗಳೂರು: ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಅವರು ಯಾಕೆ ಪತ್ರ ಬರೆದರೂ ಅಂತ ಗೊತ್ತಿಲ್ಲ. ನಮ್ಮ ಸರಕಾರ ಬಂದ ನಂತರ ನಾನು ಮುಖ್ಯ ಕಾರ್ಯದರ್ಶಿಗೆ ಆದೇಶ ಮಾಡಿ, ಗುತ್ತಿಗೆದಾರರ ಪತ್ರದಲ್ಲಿರುವ ಅಂಶಗಳ ಬಗ್ಗೆ ಆಯಾ ಇಲಾಖೆಯ ಮುಖ್ಯಸ್ಥರಿಗೆ ಹೇಳಿ ಅವುಗಳ ಬಗ್ಗೆ ವಿಚಾರಣೆ ಮಾಡಿ, ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷವಾಗಿ ನನ್ನ ಸರಕಾರ ಬಂದ ನಂತರ ಯಾವುದಾದರೂ ಟೆಂಡರ್ ಮಂಜೂರಾಗಿ, ಅಂತಿಮವಾಗಿದ್ದರೆ ಅದರ ಬಗ್ಗೆ ವಿಶೇಷವಾದ ಪರಿಶೀಲನೆ ನಡೆಸಬೇಕು ಎಂದು ಆ ಪತ್ರದಲ್ಲಿ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಅಲ್ಲದೆ, ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಟೆಂಡರ್ ಅಂದಾಜು ಮತ್ತು ಟೆಂಡರ್ ಪರಿಸ್ಥಿತಿ ಕುರಿತು ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎರಡು ಸಮಿತಿಗಳನ್ನು ರಚನೆ ಮಾಡಲು ಸರಕಾರಿ ಆದೇಶ ಹೊರಡಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಗುತ್ತಿಗೆದಾರರ ಹಿರಿತನ, ಯೋಜನೆಗಳ ಅನುಷ್ಠಾನದ ಆಧಾರದ ಮೇಲೆ, ಸ್ವಯಂಚಾಲಿತವಾಗಿ ಬಿಲ್ ತಯಾರಾಗುವಂತಹ ಹಾಗೂ ಟೆಂಡರ್ ಪ್ರಕ್ರಿಯೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಟೆಂಡರ್ ಪ್ರಕ್ರಿಯೆ ವಿಳಂಬ ಆದಷ್ಟು ಅನುಮಾನಗಳಿಗೆ ಆಸ್ಪದ ನೀಡಿದಂತಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

ಟೆಂಡರ್ ಗಳ ಪರಿಶೀಲನೆ ನಡೆಸಿದಾಗ ಅವ್ಯವಹಾರಗಳು ಆಗಿದ್ದರೆ ಹೊರಗೆ ಬರುತ್ತದೆ. ಆದರೆ, ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಯಾವುದೆ ಆಧಾರ ನೀಡಿಲ್ಲ, ನಿರ್ದಿಷ್ಟ ಪ್ರಕರಣದ ಬಗ್ಗೆಯೂ ಉಲ್ಲೇಖಿಸಿಲ್ಲ. ಸಾಮಾನ್ಯವಾಗಿ ಒಂದು ಪತ್ರ ಬರೆದಿದ್ದಾರೆ.ಆದರೂ ಕೂಡ ನಾನು ಎಲ್ಲ ಇಲಾಖೆಯ ಮುಖ್ಯಸ್ಥರಿಗೆ ವಿಚಾರಣೆ ಮಾಡಲು ಮುಖ್ಯ ಕಾರ್ಯದರ್ಶಿ ಮೂಲಕ ಸೂಚನೆ ನೀಡಿದ್ದೇನೆ. ಜೊತೆಗೆ ನನ್ನ ಸರಕಾರ ಬಂದ ನಂತರ ಯಾವುದಾದರೂ ಟೆಂಡರ್ ಅಂತಿಮವಾಗಿದ್ದರೆ ಅದನ್ನು ಕೂಡ ವಿಶೇಷ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದೇನೆ. ಆ ಮೂಲಕ ನನ್ನ ಸರಕಾರ ಪಾರದರ್ಶಕತೆಯನ್ನು ಕಾಪಾಡಿಕೊಂಡಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News