ಮಂಡ್ಯ ಜಿಲ್ಲೆಯಿಂದಲೇ ಪರಿವರ್ತನೆ ಕಾಲ ಆರಂಭವಾಗಿದೆ: ಮಾಜಿ ಸಚಿವ ಚೆಲುವರಾಯ ಸ್ವಾಮಿ
ನಾಗಮಂಗಲ, ನ.25: ಜಿಲ್ಲೆಯಲ್ಲಿ ಯಾವುದಾದರೂ ಅಭಿವೃದ್ಧಿ ಕೆಲಸಗಳು ಹಾಗೂ ಜನಪರ ಕೆಲಸಗಳು ಆಗಿದೆಯೇ ಎಂಬುದನ್ನು ಜನರು ಮನದಟ್ಟು ಮಾಡಿಕೊಳ್ಳಬೇಕು. ಹೀಗಾಗಿ ಜನರು ಪರಿವರ್ತಿನೆ ಬಯಸುವ ಕಾಲ ಬಂದಿದೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಅವರು ಹೇಳಿದರು
ನಾಗಮಂಗಲದ ಶ್ರೀಗಂಗಾದೇಶ್ವರ ಸಮುದಾಯಭವನದ ಆವರಣದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾನು 34 ತಿಂಗಳು ಅಧಿಕಾರದಲ್ಲಿದ್ದಾಗ ಅನೇಕ ಜನಪರ ಕಾರ್ಯಗಳು, ಅಭಿವೃದ್ಧಿಗಳು ಕಂಡುಬಂದವು. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಅಭಿವೃದ್ಧಿ ಕಾರ್ಯಗಳು ಕಣ್ಮರೆಯಾಗಿದೆ ಎಂದರು.
ಕೋವಿಡ್ ಬಂದಂತಹ ಸಂದರ್ಭದಲ್ಲಿ ಏನೆಲ್ಲಾ ಅವಘಡಗಳು ಸಂಭವಿಸಿದೆ ಎಂದು ಜನರು ತಿಳಿಯಬೇಕು. ಎಷ್ಟೋ ಜನರು ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡರು. ಆದರೆ ಪಕ್ಕದ ಕೇರಳದಲ್ಲಿ ಕೋವಿಡ್ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಜನರನ್ನು ಉಳಿಸಿಕೊಂಡರು ಎಂದು ಹೇಳಿದರು.
ದಿನೇಶ್ ಗೂಳಿಗೌಡ ಅವರು ಯುವಕರಾಗಿದ್ದು, ಅಪಾರ ಶಕ್ತಿ ಹಾಗೂ ಬುದ್ದಿವಂತರಾಗಿದ್ದಾರೆ. ಜಿಲ್ಲೆಯಲ್ಲಿ ಸಂಪೂರ್ಣ ಬದಲಾವಣೆ ತರಬೇಕೆಂದರೆ ಇವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ಜಿಲ್ಲೆಯ ಜನರಿಗೆ ಸ್ವಾಭಿಮಾನ ಎಂಬುದು ರಕ್ತಗತವಾಗಿ ಬಂದಿದೆ. ಒಮ್ಮೆ ತಪ್ಪು ಮಾಡುವುದು ಸಹಜ ಆದರೆ ಮತ್ತೆ ಮತ್ತೆ ಆತ ತಪ್ಪು ಮಾಡಲಾರ ಎಂದರು.
ಮಾಜಿ ಸಚಿವ ನರೇಂದ್ರಸ್ವಾಮಿ ಅವರು ಮಾತನಾಡಿ, ಮಂಡ್ಯಜಿಲ್ಲೆಯಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ತಕ್ಷಣ ನಾವು ನಿಷ್ಕ್ರಿಯವಾಗಿಲ್ಲ. ಯಾವ ವಿಚಾರದಲ್ಲೂ ಕಾಂಗ್ರೆಸ್ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿಲ್ಲ. ಆದರೆ ಸುಳ್ಳನ್ನೇ ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಪಕ್ಷವೆಂದರೆ ಅದು ಬಿಜೆಪಿ ಮಾತ್ರ ಎಂದು ಹೇಳಿದರು.
ಇತ್ತೀಚೆಗೆ ಮಂಡ್ಯದಲ್ಲಿ ಆಣೆ ಪ್ರಮಾಣದ ಜೊತೆಯಲ್ಲಿ ಭರವಸೆಗಳ ಮಹಾಪೂರವನ್ನು ಹರಿಸಿದರು. ಆದರೆ ಗೆದ್ದ ನಂತರ ಮೂಖ ಕೊಟ್ಟು ಮಾತನಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಇಷ್ಟು ವರ್ಷದಲ್ಲಿ ಬಿಜೆಪಿ ಅವರು ಮಾಡಿರುವ ಸಾಧನೆ ಏನಿದೆ ಎಂದು ಕೇಳಿದರು.
ಮಂಡ್ಯ ಜನತೆ ಅವರನ್ನು ಗೆಲ್ಲಿಸಿದ್ದರೂ ಯಾವ ಪ್ರಯೋಜನವೂ ಆಗಿಲ್ಲ. ಅವರು ಜಿಲ್ಲೆಗೆ ಕೊಟ್ಟಂತಹ ಕೊಡುಗೆ ಏನು. ಮೂಲಭೂತ ಸೌಕರ್ಯಗಳನ್ನಾಗಲಿ, ಉದ್ಯೋಗವನ್ನಾಗಲಿ ಕೊಟ್ಟಿದ್ದಾರೆಯೇ. ಪಕ್ಕದಲ್ಲಿರುವ ಹಾಸನವನ್ನು ಹಾಗೂ ಒಮ್ಮೆ ಮಂಡ್ಯ ಜಿಲ್ಲೆಯನ್ನು ಸೂಕ್ಷ್ಮವಾಗಿ ನೋಡಿದರೆ ತಿಳಿಯುತ್ತದೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಒಂದು ಫುಟ್ ಪಾತ್ ಸರಿಯಾಗಿಲ್ಲ. ಹಾಲಿಗೆ ನೀರು ಸೇರಿಸಿ ಮೋಸದ ವ್ಯಾಪರ ಮಾಡುತ್ತಿದ್ದಾರೆ. ಹೀಗೆ ಹಲವಾರು ಹಗರಣದಲ್ಲಿ ತೊಡಗಿದ್ದಾರೆ. ಅವರಿಗೆ ಆತ್ಮಸಾಕ್ಷಿ ಇದ್ದರೆ ಸಿಬಿಐ ತನಿಖೆಗೆ ಒಪ್ಪಿಕೊಳ್ಳಲಿ ಎಂದು ಮಾತನಾಡಿದರು.
ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅವರು ಮಾತನಾಡಿ, ಈ ಜಿಲ್ಲೆಯಲ್ಲಿ ಸ್ಪರ್ಧಿಸುತ್ತಿರುವ ದಿನೇಶ್ ಗೂಳಿಗೌಡ ಅವರು ಜಿಲ್ಲೆಗೆ ಹಾಗೂ ರಾಜ್ಯಕ್ಕೆ 20ಕ್ಕೂ ಹೆಚ್ಚು ವರ್ಷಗಳಿಂದ ಪರಿಚಯ. ಅವರು ಹಲವಾರು ನಾಯಕರ ಜೊತೆ ತೊಡಗಿ ಪಕ್ಷದಲ್ಲಿ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಎಂದರು.
ದಿನೇಶ್ ಗೂಳಿಗೌಡ ಅವರು ಕಾಂಗ್ರೆಸ್ ಪಕ್ಷಕ್ಕೆ 20ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಗೌರವ ಹಾಗೂ ಘನತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದನ್ನು ಯಾರು ಮರೆಯಬಾರದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇದ್ದಾಗ ಅನುದಾನ ಸರಾಗವಾಗಿ ಬರುತ್ತಿದ್ದವು ಇದರಿಂದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ಸಾಗುತ್ತಿದ್ದವು. ಆದರೆ ಇಂದು ಅಭಿವೃದ್ಧಿ ಎಂಬುದು ಎಲ್ಲಿದೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು. ಇಂದು ಅಭಿವೃದ್ಧಿ ಕುಂಠಿತವಾಗಿರುವುದರ ಜೊತೆಗೆ ಜನರ ಜೀವನ ದುರ್ಬಲವಾಗಿದೆ ಎಂದರು.
ಜಿಲ್ಲೆಯಲ್ಲಿರುವ ರಸ್ತೆಯಲ್ಲಿ ಹಳ್ಳಗಳು ಬಿದ್ದಿವೆ. ಬಿಜೆಪಿ ಸರ್ಕಾರ ಅಭಿವೃದ್ಧಿ ಎಂಬುದು ಮರೆತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತದಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯದಂತಹ ಯೋಜನೆಗಳನ್ನು ತಂದು ಜನಪರ ಆಡಳಿತ ನೀಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಯಾವುದೇ ವರ್ಗಕ್ಕೂ ಬೇಧಭಾವ ಮಾಡದೆ ಎಲ್ಲಾ ವರ್ಗದವರಿಗೂ ಸ್ಥಾನ ನೀಡಿದೆ. ಹೀಗಾಗಿಯೇ ಸೂಕ್ತ ಅಭ್ಯರ್ಥಿಯನ್ನು ಈ ಬಾರಿ ಕಾಂಗ್ರೆಸ್ ಆಯ್ಕೆ ಮಾಡಿದೆ. ಇದಕ್ಕೆ ಪ್ರತಿಯೊಬ್ಬರೂ ಸಹಕರಿಸಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ಮಾತನಾಡಿ, ದಿನೇಶ್ ಅವರು ಕಾಂಗ್ರೆಸ್ ಪಕ್ಷಕ್ಕೆ ಚಿಕ್ಕವಯಸ್ಸಿನಿಂದಲೂ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ 100ಕ್ಕೂ ಹೆಚ್ಚು ಇತಿಹಾಸ ಇರುವ ಪಕ್ಷ. ಈ ಪಕ್ಷ ಮಾಡಿರುವ ಸೇವೆಯನ್ನು ಇಂದಿನ ಜನರು ತಿಳಿಯಬೇಕು ಎಂದು ಹೇಳಿದರು.
ಈ ರಾಷ್ಟ್ರದಲ್ಲಿ ಅತಿ ಸುಳ್ಳು ಹೇಳಿ ಪ್ರಧಾನಿ ಆದವರೆಂದರೆ ಅದು ನರೇಂದ್ರ ಮೋದಿ. ಯುವಕರಿಗೆ ಕೆಲಸ ಕೊಡುತ್ತೇನೆ ಎಂದು ಹೇಳಿ ಇರುವ ಕೆಲಸವನ್ನು ಕಿತ್ತುಕೊಳ್ಳುತ್ತಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಮಾಡಿದ್ದಾರೆ. ಆದರೆ ಮುಂದೆ 5 ರಾಜ್ಯಗಳ ವಿಧಾನಸಭೆ ಚುನಾವಣೆ ಬರುತ್ತಿರುವ ದೃಷ್ಟಿಯಿಂದ ಜನರಿಗೆ ಕಣ್ಣೊರೆಸುವ ಸಲುವಾಗಿ 5 ರೂ ಬೆಲೆಯನ್ನು ಪೆಟ್ರೋಲ್ ಮೇಲೆ ಇಳಿಸಿದ್ದರೂ 100 ಒಳಗಿಲ್ಲ. ಇದು ಜನರ ಕಣ್ಣೋರೆಸುವ ತಂತ್ರ ಎಂದು ಮಾತನಾಡಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಆಡಳಿತಕ್ಕೆ ಬಂದಾಗ ಮಾಡಿದ ಸಾಧನೆ ಏನು. ಇದನ್ನು ಜನರು ತಿಳಿದುಕೊಳ್ಳಬೇಕು. ಜೆಡಿಎಸ್ ಪಕ್ಷ ಅಪ್ಪ ಮಕ್ಕಳ ಪಕ್ಷವಾಗಿದ್ದು, ಮಂಡ್ಯ ನಮ್ಮದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ಗೆದ್ದರೆ ಒಮ್ಮೆಯೂ ಕಣ್ಣಿಗೆ ಕಾಣಿಸುವುದಿಲ್ಲ ಎಂದು ಹೇಳಿದರು.
ಈ ಬಾರಿ ದಿನೇಶ್ ಗೂಳಿಗೌಡ ಅವರಿಗೆ ಒಂದು ಅವಕಾಶ ಕೊಡಿ. ಪ್ರಾಮಾಣಿಕವಾಗಿ ಅವರು ನಿಮ್ಮ ಕೆಲಸ ಮಾಡುತ್ತಾರೆ. ಈ ಗೆಲುವು ಮುಂದಿನ ಚುನಾವಣೆಗೆ ದಾರಿ ದೀಪವಾಗಲಿದೆ ಎಂದು ತಿಳಿಸಿದರು.
ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷರಾಮಯ್ಯ ಅವರು ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ದಿನೇಶ್ ಅವರನ್ನು ಗೆಲ್ಲಿಸಲೇಬೇಕು. ಪ್ರತಿಯೊಂದು ಮನೆಗಳಿಗೆ ತೆರಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಗ್ಗೆ ತಿಳಿಸಿಬೇಕು ಎಂದರು.
ಕಳೆದ 6-7 ವರ್ಷಗಳಿಂದ ಬಿಜೆಪಿ ಸರ್ಕಾರದಿಂದ ಯಾವ ಅಭಿವೃದ್ಧಿ ಕೆಲಸವೂ ಆಗಿಲ್ಲ. ಯುವಕರ ಪರ, ಮಹಿಳೆಯರಪರ ಒಂದೂ ಕೆಲಸಗಳು ಆಗಿಲ್ಲ. 2-3 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿ ಯುವಕರಿಗೆ ಮೋಸ ಮಾಡುತ್ತಾ ಅಧಿಕಾರಕ್ಕೆ ಬಂದಿದ್ದಾರೆ ಎಂದು ಹೇಳಿದರು.
ನಾಗಮಂಗಲದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಅವರು ಮಾತನಾಡಿ, ಕಳೆದ ಬಾರಿ ಗೆದ್ದವರು ಇದುವರೆಗೂ ಒಂದು ಮಾತು ಸಹ ಆಡಿಲ್ಲ. ಅಲ್ಲದೆ ಯಾವ ಕ್ಷೇತ್ರಗಳಿಗೂ ಅವರು ಭೇಟಿ ನೀಡಿಲ್ಲ. ಆದರೆ ಈ ಬಾರಿ ಜನರು ಕಳೆದ ಬಾರಿಯ ತಪ್ಪನ್ನು ಮಾಡಬಾರದು ಎಂದರು
ಇಲ್ಲಿಂದ ಗೆದ್ದು ಹೋದವರು ಒಂದೇ ಒಂದು ರೂಪಾಯಿ ಹಣವನ್ನು ಖರ್ಚು ಮಡಿಲ್ಲ. ಇಲ್ಲಿನ ಜನರು ಇಲ್ಲಿ ಅವರು ಮಾಡಿರುವ ಒಂದು ಗುರುತರವಾದ ಕೆಲಸವನ್ನು ನೋಡಬೇಕಾಗಿದೆ. ಕೇವಲ ಬೂಟಾಟಿಕೆ ಮಾಡಿಕೊಂಡು ರಾಜಕೀಯಕ್ಕೆ ಚುನಾವಣೆಯಲ್ಲಿ ನಿಂತಿದ್ದಾರೆ. ಕಳೆದ ಬಾರಿಯ ತಪ್ಪನ್ನು ಮತ್ತೆ ಮಾಡದೆ ಮಂಡ್ಯ ಜಿಲ್ಲೆಯವರೇ ಆದ ದಿನೇಶ್ ಗೂಳಿಗೌಡ ಅವರನ್ನು ಈ ಬಾರಿ ಜನರು ಕೈ ಹಿಡಿಯಬೇಕಾಗಿದೆ ಎಂದು ಹೇಳಿದರು.
ದಿನೇಶ್ ಗೂಳಿಗೌಡ ಅವರು 20ಕ್ಕೂ ಹೆಚ್ಚು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಸೇವೆಸಲ್ಲಿಸುತ್ತಾ ಬಂದಿದ್ದಾರೆ. ಹಲವಾರು ಜನಪರ ನಾಯಕರ ಜೊತೆ ವಿಶೇಷ ಕರ್ತವ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದರೂ ಸರಳ ಸೌಜನ್ಯದಿಂದ ಇದ್ದಾರೆ. ಇವರನ್ನು ಗೆಲ್ಲಿಸುವ ಮೂಲಕ ನಮ್ಮ ಪ್ರತಿಷ್ಠೆಯನ್ನು ಮತ್ತೆ ತೋರಿಸಲು ಅವಕಾಶ ಕೊಡಬೇಕು ಎಂದು ಹೇಳಿದರು.
ಅಭ್ಯರ್ಥಿ ದಿನೇಶ್ ಗೂಳಿಗೌಡ ಅವರು ಮಾತನಾಡಿ, ಇದೆ ಜಿಲ್ಲೆಯವನಾದ ನನಗೆ ಕಾಂಗ್ರೆಸ್ ಪಕ್ಷ ಒಂದು ಅವಕಾಶ ನೀಡಿದೆ. ಈಗಾಗಲೇ ಗ್ರಾಮದ ಸಮಸ್ಯೆಗಳ ಬಗ್ಗೆ ಮಾರ್ಗದರ್ಶಕರಿಂದ ತಿಳಿದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಆಯಾ ಸ್ಥಳಗಳಿಗೆ ಭೇಟಿ ನೀಡಿ ವಾಸ್ತವ್ಯ ಹೂಡಿ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವೆ ಎಂದರು.
ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಎಂ.ಎಸ್.ಆತ್ಮಾನಂದ, ರಮೇಶ್ ಬಾಬು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಮಂಡ್ಯ ಜಿಲ್ಲಾಕಾಂಗ್ರೆಸ್ ಅಧ್ಯಕ್ಷರಾದ ಸಿ.ಡಿ.ಗಂಗಾಧರ್, ಮಾಜಿ ವಿಧಾನ ಪರಿಷತ್ತಿನ ಸದಸ್ಯ ರಾಮಕೃಷ್ಣ, ಎಪಿಎಂಸಿ ನಿರ್ದೇಶಕ ರಾಜೇಶ್, ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷರಾಮಯ್ಯ ರಾಜೇಗೌಡ, ಮಹಿಳಾ ಘಟಕದ ಅಧ್ಯಕ್ಷ ಅಂಜನಾ ಶ್ರೀಕಾಂತ್, ವಿಜಯ್ ಕುಮಾರ್, ನಗರ ಪಾಲಿಕೆ ಸದಸ್ಯ ರಹೀಮ್, ಕಾಂಗ್ರೆಸ್ ಮುಖಂಡರಾದ ಹುಚ್ಚೇಗೌಡ, ಸಿದ್ದರಾಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಸೇರಿದಂತೆ ಇತರ ಗಣ್ಯರು ಹಾಜರಿದ್ದರು.