ಕಾಳಸಂತೆಯಲ್ಲಿ ರೆಮ್‍ಡೆಸಿವಿರ್ ಮಾರಾಟ: ಮೆಡಿಕಲ್ ರೆಪ್ರೆಸೆಂಟೇಟಿವ್‍ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಬೆಂಗಳೂರು, ನ.25: ಕೊರೋನ ಎರಡನೆ ಅಲೆ ಸಂದರ್ಭದಲ್ಲಿ ಜೀವರಕ್ಷಕ ಔಷಧಿ ರೆಮ್‍ಡೆಸಿವಿರ್‍ನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಆರೋಪದಡಿ ದಾಖಲಿಸಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮೆಡಿಕಲ್ ರೆಪ್ರೆಸೆಂಟೇಟಿವ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಕೋವಿಡ್ ವಿಪತ್ತಿನ ಸಂದರ್ಭದಲ್ಲಿ ಸಾರ್ವಜನಿಕರನ್ನು ದೊಡ್ಡ ಪ್ರಮಾಣದಲ್ಲಿ ವಂಚಿಸಿದ ಮತ್ತು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ ಇಂಥ ಪ್ರಕರಣಗಳನ್ನು ಸರಳ ಅಪರಾಧ ಎಂದು ಹೇಳಲಾಗದು. ಹೀಗಾಗಿ ಅರ್ಜಿದಾರನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಹೀಗಾಗಿ ಅರ್ಜಿದಾರನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಕಾಳಸಂತೆಯಲ್ಲಿ ರೆಮ್‍ಡಿಸಿವರ್ ಮಾರಾಟ ಮಾಡಿದ ಆರೋಪದಡಿ ಬೆಂಗಳೂರಿನ ಜೆಸಿ ನಗರ ಠಾಣೆ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ಸಿ.ವಿ.ಚೇತನ್ ಸಲ್ಲಿಸಿದ್ದ ಅರ್ಜಿಯನ್ನ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ಧ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪ್ರಕರಣವೇನು: 2021ರ ಮೇ 6ರಂದು ಕಾಳಸಂತೆಯಲ್ಲಿ ಸರಕಾರ ನಿಗದಿಪಡಿಸಿದ್ದ ಬೆಲೆಗಿಂತ ಹೆಚ್ಚಿನ ದರಕ್ಕೆ ಚೇತನ್ ರೆಮ್‍ಡೆಸಿವಿರ್ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಜೆಸಿ ನಗರ ಠಾಣೆ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದರು.
ನಂತರ ವ್ಯಕ್ತಿಯೊಬ್ಬರನ್ನು ಇದೇ ತಂಡದ ಮತ್ತೊಬ್ಬ ಆರೋಪಿ ಬಳಿ ಕಳುಹಿಸಿ, ತಮ್ಮ ಕುಟುಂಬ ಸದಸ್ಯರೊಬ್ಬರಿಗೆ ಕೋವಿಡ್ ತಗುಲಿದ್ದು, ರೆಮ್‍ಡೆಸಿವಿರ್ ನೀಡಬೇಕೆಂದು ಕೋರಲು ಸೂಚಿಸಿದ್ದರು. ಅದರಂತೆ ಆರೋಪಿ 3 ರೆಮ್‍ಡೆಸಿವಿರ್ ಇಂಜಕ್ಷನ್‍ಗಳನ್ನು ತಲಾ 25 ಸಾವಿರದಂತೆ ಮಾರಾಟ ಮಾಡಿದ್ದರು. ಈ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ, ಡ್ರಗ್ ಕಂಟ್ರೋಲ್ ಆ್ಯಕ್ಟ್, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿದ್ದರು. ಆರೋಪಿಗೆ ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಿಸಿದ್ದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದರು.