ಕಲ್ಯಾಣ ಕರ್ನಾಟಕ ಭಾಗದಲ್ಲಿನ ಖಾಲಿ ಹುದ್ದೆಗಳ ನೇಮಕಕ್ಕೆ ಸೂಚನೆ
ಬೆಂಗಳೂರು, ನ. 25: ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಸಂಪನ್ಮೂಲ ಕ್ರೋಡೀಕರಣದ ಉದ್ದೇಶಕ್ಕಾಗಿ ತಡೆ ಹಿಡಿಯಲಾಗಿದ್ದ ಕಲ್ಯಾಣ ಕರ್ನಾಟಕ ವೃಂದದಲ್ಲಿ ಈಗಾಗಲೇ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯ ಅನುಮತಿ ನೀಡಿರುವ ಹುದ್ದೆಗಳ ನೇಮಕಾತಿ ಆದೇಶ ನೀಡಲು ಕ್ರಮ ವಹಿಸಬೇಕು ಎಂದು ಆರ್ಥಿಕ ಇಲಾಖೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಐಎನ್‍ಎಸ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ.
ಇಲಾಖೆಗಳಲ್ಲಿ ಶೇ.80ಕ್ಕಿಂತ ಕಡಿಮೆ ಇದ್ದಲ್ಲಿ ಅಂತಹ, ಸಂದರ್ಭದಲ್ಲಿ ವೃಂದಬಲದ ಶೇ.80ರ ವರೆಗೆ ಹುದ್ದೆಗಳನ್ನು ನೇರ ನೇಮಕಾತಿಯಡಿ ಭರ್ತಿ ಮಾಡಿಕೊಳ್ಳಲು ಆಡಳಿತ ಇಲಾಖೆಗಳು ತಮ್ಮ ಹಂತದಲ್ಲಿಯೇ ನಿಯಮಾನುಸಾರ ಪರಿಶೀಲಿಸಿ ನೇಮಕಾತಿ ಮುಂದುವರಿಸಲು ಕ್ರಮ ವಹಿಸಬೇಕು. ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಮತ್ತು ಗ್ರೂಪ್ ಡಿ ವೃಂದಗಳ ಹುದ್ದೆಗಳನ್ನು ಅನುದಾನದ ಲಭ್ಯತೆಗೆ ಒಳಪಟ್ಟು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳತಕ್ಕದ್ದು ಎಂದು ಸೂಚಿಸಲಾಗಿದೆ.
ನೇರ ನೇಮಕಾತಿಯಡಿ ಭರ್ತಿಯಾಗುವ ಹುದ್ದೆಗಳಿಗೆ ಆಯವ್ಯಯದಲ್ಲಿ ಸೂಕ್ತ ಅನುದಾನವನ್ನು ಕಲ್ಪಿಸಿಕೊಳ್ಳುವ ಸಲುವಾಗಿ ನೇಮಕಾತಿ ಆದೇಶ ಹೊರಡಿಸುವ ಮುನ್ನ ಆರ್ಥಿಕ ಇಲಾಖೆಯ ಅನುಮತಿ ಪಡೆಯತಕ್ಕದ್ದು. ಆಡಳಿತ ಇಲಾಖೆಗಳ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳ ಹಂತದಲ್ಲೇ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರಿಸಿ ನಿಯಮಾನುಸಾರ ಭರ್ತಿ ಮಾಡಿಕೊಳ್ಳತಕ್ಕದ್ದು ಎಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.