ಸಚಿವ ಸಂಪುಟ ಸಭೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಸಚಿವರ ಅಸಮಾಧಾನ

Update: 2021-11-25 17:04 GMT

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಗೆ ಹೊಸದಾಗಿ ತಾಲೂಕು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುದಾನ ಜೊತೆಗೆ ತಾಯಿ ಮಕ್ಕಳ ಆಸ್ಪತ್ರೆ ಕಾಮಗಾರಿಗೆ ಅನುಮೋದನೆ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಸಚಿವರಾದ ಡಾ.ನಾರಾಯಣಗೌಡ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಎಂ.ಟಿ.ಬಿ.ನಾಗರಾಜ್ ಸೇರಿದಂತೆ ಇತರ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೆ.ಆರ್.ಪೇಟೆಯಲ್ಲಿ ಸರಕಾರಿ ಆಸ್ಪತ್ರೆ ಸಂಬಂಧ ಹಲವಾರು ಬಾರಿ ಸಚಿವರಿಗೆ ಮನವಿ ಮಾಡಿದರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಈಗ ನೋಡಿದರೆ ತಮ್ಮ ಕ್ಷೇತ್ರಕ್ಕೆ ಎರಡೆರಡು ಆಸ್ಪತ್ರೆಗಳನ್ನು ಮಂಜೂರು ಮಾಡಿಸಿಕೊಳ್ಳುತ್ತಿದ್ದಾರೆ ಎಂದು ನಾರಾಯಣಗೌಡ ಕಿಡಿಗಾರಿದ್ದಾರೆ ಎನ್ನಲಾಗಿದೆ. ಇದಕ್ಕೆ ಇತರ ಸಚಿವರು ದನಿಗೂಡಿಸಿದರು ಎಂದು ಹೇಳಲಾಗಿದೆ.

ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚಿಕ್ಕಬಳ್ಳಾಪುರದಲ್ಲಿ ತಾಯಿ ಹಾಗೂ ಮಕ್ಕಳ ಆಸ್ಪತ್ರೆ ಮಂಜೂರಾತಿಗಾಗಿ ಮಂಡಿಸಿರುವ ಪ್ರಸ್ತಾವನೆಯನ್ನು ಮುಂದೆ ಹಾಕಿ, ಕೆ.ಆರ್.ಪೇಟೆ ಆಸ್ಪತ್ರೆಯ ಪ್ರಸ್ತಾವನೆಯೊಂದಿಗೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸಚಿವರ ನಡುವಿನ ನಡುವಿನ ಜಟಾಪಟಿ ಅಂತ್ಯಗೊಂಡಿತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News