ಕಾಂಗ್ರೆಸ್ ಅವಧಿಯ ಟೆಂಡರ್ ಕಾಮಗಾರಿಗಳ ಬಗ್ಗೆಯೂ ತನಿಖೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-11-26 12:03 GMT
ಫೈಲ್ ಚಿತ್ರ

ದಾವಣಗೆರೆ, ನ.26: 'ಸರಕಾರ ವಜಾ ಮಾಡುವ ಬಗ್ಗೆ ರಾಜ್ಯಪಾಲರಿಗೆ ವಿಪಕ್ಷಗಳು ದೂರು  ಸಲ್ಲಿಸಿರುವುದು ಹಾಸ್ಯಾಸ್ಪದ. ಕಾಮಗಾರಿಗಳ ಪರ್ಸಂಟೇಜ್ ವಿಚಾರದಲ್ಲಿ ಕಾಂಗ್ರೆಸ್ ಬಹಳ ಆಸಕ್ತಿ ವಹಿಸಿರುವುದರಿಂದ ಅವರ ಕಾಲದ ಟೆಂಡರ್ ಕಾಮಗಾರಿಗಳನ್ನು ತನಿಖೆಗೊಳಪಡಿಸುತ್ತೇವೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ದಾವಣಗೆರೆಯಲ್ಲಿಸಂವಿಧಾನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

'ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿನ  ಗುತ್ತಿಗೆದಾರರ ಪರ್ಸೆಂಟೇಜ್  ಅನುಭವವನ್ನು  ಪತ್ರದಲ್ಲಿ ಬರೆದಿದ್ದಾರೆ. ಪರ್ಸೆಂಟೇಜ್  ಜನಕರೇ ಕಾಂಗ್ರೆಸ್ ನವರು.  ಪ್ರತಿಬಾರಿ ಅದನ್ನು ಹೆಚ್ಚು ಮಾಡಿಕೊಂಡು ಬಂದಿರುವುದು ಅವರೇ. ಹಾಗೂ ಇಬ್ಬರೂ ಕಾಂಗ್ರೆಸ್ ನಾಯಕರು ಪಿಸುಮಾತಿನಲ್ಲಿ ಈ ಬಗ್ಗೆ ಮಾತನಾಡಿರುವುದನ್ನು ಮಾಧ್ಯಮಗಳೇ ಚಿತ್ರೀಕರಿಸಿವೆ. ಅವರೇ ಪ್ರಾರಂಭಿಸಿ ಅವರೇ ದೂರು ಕೊಟ್ಟಿರುವುದು ನಿಜಕ್ಕೂ ಹಾಸ್ಯಾಸ್ಪದ' ಎಂದರು.

'ಪತ್ರದಲ್ಲಿ  ಯಾವುದೇ ನಿರ್ದಿಷ್ಟ ಕಾಮಗಾರಿ ಅಥವಾ ಇಲಾಖೆ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. ಸಾಮಾನ್ಯವಾಗಿ ಪತ್ರ ಬರೆದಿದ್ದಾರೆ. ಆದರೂ ತನಿಖೆ ಮಾಡಲಾಗುವುದು. ಈ ಪರ್ಸಂಟೇಜ್ ವಿಚಾರದಲ್ಲಿ ಕಾಂಗ್ರೆಸ್ ಬಹಳ ಆಸಕ್ತಿ ವಹಿಸಿರುವುದರಿಂದ ಅವರ ಕಾಲದ ಟೆಂಡರ ಕಾಮಗಾರಿಗಳ ಬಗ್ಗೆಯೂ ತನಿಖೆಗೆ ಒಳಪಡಿಸಲಾಗುವುದು' ಎಂದು ಸಿಎಂ ಹೇಳಿದರು. 

ಬೆಳೆ ಹಾನಿಗೆ ಪರಿಹಾರ: ಈಗಾಗಲೇ ಪ್ರತಿಯೊಂದು ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಯೋಜನಾ ಇಲಾಖೆಗಳು ಜಂಟಿ ಸಮೀಕ್ಷೆ ಮಾಡಿದ್ದು, ಉತ್ತರ ಕರ್ನಾಟಕದಲ್ಲಿ ಭತ್ತ, ಮೆಕ್ಕೆ ಜೋಳ, ದಕ್ಷಿಣ ಕರ್ನಾಟಕದಲ್ಲಿ ರಾಗಿ, ಭತ್ತ, ತರಕಾರಿ ಎಲ್ಲೇ ಪೈರುಗಳು ನೆಲಕಚ್ಚಿ  ಮೊಳಕೆಯೊಡೆದು ನಾಶವಾಗಿವೆ. ಇದರ ಸಂಪೂರ್ಣ ಸಮೀಕ್ಷೆ ಮಾಡಲು ಸೂಚಿಸಿದೆ. ಹಿಂದೆ ವಿವರವಾದ ಸಮೀಕ್ಷೆ ಆಗಿ ವರದಿ ಸಲ್ಲಿಸುವುದು ತಡವಾಗುತ್ತಿತು. ಸಮೀಕ್ಷೆಯಾದ 2-3 ತಿಂಗಳಲ್ಲಿ ಪರಿಹಾರ ನೀಡಲಾಗುತ್ತಿತ್ತು. ಈಗ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಕೃತಿ ವಿಕೋಪ ನಿರ್ವಹಣೆ ಕಾರ್ಯದರ್ಶಿಯವರಿಗೆ ಪತ್ರವನ್ನು ಬರೆದಿದ್ದು, ದಿನನಿತ್ಯದ ಸಮೀಕ್ಷೆಯ ವರದಿ ಆಧರಿಸಿ , ಪರಿಹಾರ ಆಪ್ ನಲ್ಲಿ ಅಪ್ ಲೋಡ್ ಆದ ಕೂಡಲೇ 24 ಗಂಟೆಯಲ್ಲಿ ಪರಿಹಾರ ನೀಡಲು ಕೋರಿದೆ ಎಂದರು. 

ಸಮಗ್ರ ವರದಿ ಬಂದ ನಂತರ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು. ದಾವಣಗೆರೆಯಲ್ಲಿ ಕಣ್ಣಳತೆ (eyesight) ಸಮೀಕ್ಷೆಯಲ್ಲಿ 9800 ಹೆಕ್ಟೇರ್  ಕೃಷಿ ಬೆಳೆ, 2147 ತೋಟಗಾರಿಕೆ ಬೆಳೆ ನಷ್ಟವಾಗಿದೆ. ಈ ಬಗ್ಗೆಯೂ ಸಮೀಕ್ಷೆ ಮಾಡಲು ತಿಳಿಸಲಾಗಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News