ಬೆಳಗಾವಿ: ಬಲಪಂಥೀಯರ ದಾಳಿ ಬೇಡ ಎಂದಾದರೆ ಪ್ರಾರ್ಥನಾ ಸಭೆಗಳನ್ನು ನಡೆಸದಂತೆ ಕ್ರೈಸ್ತರಿಗೆ ಪೊಲೀಸರ ಎಚ್ಚರಿಕೆ; ವರದಿ

Update: 2021-11-26 10:45 GMT
ಸಾಂದರ್ಭಿಕ ಚಿತ್ರ

ಬೆಳಗಾವಿ, ನ.26: ನಗರದ ಪೊಲೀಸರು ಪ್ರಾರ್ಥನಾ ಸಭೆಗಳನ್ನು ನಡೆಸುವುದರ ವಿರುದ್ಧ ಪ್ರೊಟೆಸ್ಟಂಟ್ ಕ್ರೈಸ್ತರಿಗೆ ‘ಸ್ನೇಹಪರ ಎಚ್ಚರಿಕೆ’ಯನ್ನು ನೀಡಿರುವುದರಿಂದ ಅವರು ಆತಂಕಕ್ಕೆ ಒಳಗಾಗಿದ್ದಾರೆ. ತೀವ್ರವಾದಿ ಹಿಂದುತ್ವ ಗುಂಪುಗಳ ಇತ್ತೀಚಿನ ಸರಣಿ ದಾಳಿಗಳಿಂದ ಕ್ರೈಸ್ತ ಸಮುದಾಯದಲ್ಲಿ ಮನೆ ಮಾಡಿರುವ ಅಭದ್ರತೆಯನ್ನು ಪರಿಗಣಿಸಿದರೆ ಪೊಲೀಸ್ ಕ್ರಮವು ದುರುದ್ದೇಶಪೂರಿತವಾಗಿರುವಂತಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಗೆ ಬೆದರಿಕೆಯೊಡ್ಡುವವರ ಹಿಂದೆ ಬೀಳುವ ಬದಲು ತಗ್ಗಿ ನಡೆದುಕೊಳ್ಳುವಂತೆ ಪ್ರೊಟೆಸ್ಟಂಟ್ರಿಗೆ ಸೂಚಿಸಲು ನಿರ್ಧರಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.

ಕೆಲವು ಪ್ಯಾಸ್ಟರ್(ಧರ್ಮಗುರು)ಗಳನ್ನು ಕರೆಸಿದ್ದ ಪೊಲೀಸರು, ಅವರ ಮೇಲೆ ಬಲಪಂಥೀಯರು ದಾಳಿಗಳನ್ನು ನಡೆಸಬಹುದು ಮತ್ತು ರಕ್ಷಣೆ ನೀಡಲು ತಮಗೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದು ಪ್ಯಾಸ್ಟರ್ ಥಾಮಸ್ ಜಾನ್ಸನ್ ಅವರು  thenewsminute.com ನೊಂದಿಗೆ ಮಾತನಾಡುತ್ತ ಹೇಳಿದರು.

ಪ್ರಾರ್ಥನಾ ಸಭೆಗಳನ್ನು ನಿಷೇಧಿಸಲಾಗಿಲ್ಲ, ಏಕೆಂದರೆ ಲಿಖಿತವಾಗಿ ಏನನ್ನೂ ನೀಡಿಲ್ಲ. ಆದರೆ ಕೋಮು ಸೌಹಾರ್ದವನ್ನು ಕಾಯ್ದುಕೊಳ್ಳಲು ಅದು ಅಗತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ಯಾಸ್ಟರ್ ಚೆರಿಯನ್ ಮೇಲೆ ದಾಳಿ ನಡೆದಿದ್ದ ಕ್ಯಾಂಪ್ ಮತ್ತು ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸರು, ನಿಮ್ಮ ಸ್ವಂತ ಚರ್ಚ್ ಕಟ್ಟಡಗಳಿದ್ದರೆ ನೀವು ಪ್ರಾರ್ಥನಾ ಸಭೆಗಳನ್ನು ನಡೆಸಬಹುದು. ಆದರೆ ಅವುಗಳನ್ನು ಬಾಡಿಗೆಯ ಕಟ್ಟಡಗಳಲ್ಲಿ ಅಥವಾ ಖಾಸಗಿ ನಿವಾಸಗಳಲ್ಲಿ ನಡೆಸಬೇಡಿ ಎಂದು ಪ್ಯಾಸ್ಟರ್ಗಳಿಗೆ ತಿಳಿಸಿದ್ದಾರೆ ಎಂದೂ ಜಾನ್ಸನ್ ಹೇಳಿದ್ದಾರೆ.

ಕುತೂಹಲದ ವಿಷಯವೆಂದರೆ ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಪ್ರಾರ್ಥನಾ ಸಭೆಗಳನ್ನು ನಡೆಸದಂತೆ ಕ್ರೈಸ್ತ ಗುಂಪುಗಳಿಗೆ ತಿಳಿಸಲಾಗಿದೆ. ಡಿ.13ರಿಂದ ಡಿ.24ರವರೆಗೆ ನಡೆಯಲಿರುವ ಅಧಿವೇಶನವು ವಿವಾದಾತ್ಮಕ ಮತಾಂತರ ನಿಷೇಧ ಮಸೂದೆಯನ್ನು ಒಳಗೊಳ್ಳುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿನ 25ಕ್ಕೂ ಅಧಿಕ ಪ್ಯಾಸ್ಟರ್ಗಳನ್ನು ಸಂಪರ್ಕಿಸಿರುವ ಪೊಲೀಸರು ಪ್ರಾರ್ಥನಾ ಸಭೆಗಳನ್ನು ನಡೆಸದಂತೆ ಅವರಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಶ್ರೀರಾಮಸೇನೆ ಮತ್ತು ಬಜರಂಗ ದಳ ಸೇರಿದಂತೆ ಹಲವಾರು ಹಿಂದುತ್ವ ಗುಂಪುಗಳು ರಾಜ್ಯದ ವಿವಿಧೆಡೆಗಳಲ್ಲಿ ಕ್ರಿಶ್ಚಿಯನ್ ಧರ್ಮಗುರುಗಳಿಂದ ‘ಬಲವಂತದ ಮತಾಂತರ’ದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಪ್ರಾರ್ಥನಾ ಸಭೆಗಳನ್ನು ನಡೆಸಲು ಕಟ್ಟಡಗಳನ್ನು ಬಾಡಿಗೆಗೆ ನೀಡದಂತೆ ಹಲವಾರು ಮಾಲಕರಿಗೆ ಸೂಚಿಸಲಾಗಿದೆ. ಕೆಲವರಿಗೆ ಬಲಪಂಥೀಯ ಗುಂಪುಗಳು ಬೆದರಿಕೆಯೊಡ್ಡಿದ್ದರೆ ಹಲವರಿಗೆ ಪೊಲೀಸರು ‘ಸಲಹೆ ’ನೀಡಿದ್ದಾರೆ ಎಂದು ಜಾನ್ಸನ್ ತಿಳಿಸಿದರು.

ಫುಲ್ ಗಾಸ್ಪೆಲ್ ಚರ್ಚ್ ಗೆ ಸಂಬಂಧಿಸಿರುವ ಹೆಚ್ಚಿನ ಪ್ಯಾಸ್ಟರ್ಗಳು ಸ್ವಂತದ ಚರ್ಚ್ ಹೊಂದಿಲ್ಲವಾದ್ದರಿಂದ ಬಾಡಿಗೆಯ ಹಾಲ್ಗಳಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದಾರೆ. ಈಗ ಅವರು ಶ್ರೀರಾಮಸೇನೆಯಂತಹ ಹಿಂದುತ್ವ ಗುಂಪುಗಳ ನಿಗಾದಲ್ಲಿದ್ದಾರೆ ಎನ್ನಲಾಗಿದೆ.

‘ನಮ್ಮ ರವಿವಾರದ ಪ್ರಾರ್ಥನೆಗಳಲ್ಲಿ ಸುಮಾರು 20 ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ದಿನಗೂಲಿ ಕಾರ್ಮಿಕರಾಗಿದ್ದು ತೊಂದರೆಗೆ ಒಳಗಾಗುವ ಭೀತಿಯಲ್ಲಿದ್ದಾರೆ. ಬೆಳಗಾವಿಯಲ್ಲಿ ಕೇವಲ ಪ್ರಾಟೆಸ್ಟಂಟ್ರನ್ನು ಗುರಿಯಾಗಿಸಿಕೊಳ್ಳಲಾಗಿದೆ, ಏಕೆಂದರೆ ಅವರು ಕ್ಯಾಥೋಲಿಕ್ರಂತೆ ಪ್ರಭಾವಿಗಳಲ್ಲ’ ಎಂದು ಹೆಸರು ಹೇಳಿಕೊಳ್ಳಲು ಬಯಸದ ಇನ್ನೋರ್ವ ಪ್ಯಾಸ್ಟರ್ ಹೇಳಿದರು.

ಬೆಳಗಾವಿಯಲ್ಲಿ 30ರಿಂದ 40 ಪ್ಯಾಸ್ಟರ್ಗಳಿದ್ದು ಅವರೀಗ ಆನ್ಲೈನ್ ಪ್ರಾರ್ಥನೆಗಳನ್ನು ನಡೆಸುತ್ತಿದ್ದಾರೆ ಎಂದು ಪ್ಯಾಸ್ಟರ್ ಬೆನ್ನಿ ಪೌಲ್ ಸತುರಿ ತಿಳಿಸಿದರು. ಅವರು ನಡೆಸುವ ರವಿವಾರದ ಪ್ರಾರ್ಥನಾ ಸಭೆಗಳಿಗೆ 150ರಿಂದ 200 ಜನರು ಹಾಜರಾಗುತ್ತಿದ್ದಾರೆ.

ಪ್ರಾರ್ಥನಾ ಸಭೆಗಳ ಮೇಲೆ ದಾಳಿಗಳಂತಹ ಚಟುವಟಿಕೆಗಳಿಗೆ ಈಗ ಬೆಳಗಾವಿಯನ್ನು ಕೇಂದ್ರವಾಗಿಸಿಕೊಳ್ಳಲಾಗಿದೆ. ಏಕೆಂದರೆ ಇಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ ಮತ್ತು ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಮುಂದೆ ತಳ್ಳಲು ಅವರು ಬಯಸಿದ್ದಾರೆ ಎಂದು ಪ್ಯಾಸ್ಟರ್ ಸತುರಿ ಹೇಳಿದರು.

ಕಳೆದ ಎರಡು ವಾರಗಳಿಂದ ತಮ್ಮ ಆಸ್ತಿಗೆ ಹಾನಿಯುಂಟಾಗುವ ಭೀತಿಯಿಂದ ಪ್ರಾರ್ಥನಾ ಸಭೆಗಳಿಗೆ ಹಾಲ್ ಗಳನ್ನು ಬಾಡಿಗೆಗೆ ನೀಡಲು ಹೆಚ್ಚಿನ ಮಾಲಿಕರು ನಿರಾಕರಿಸುತ್ತಿದ್ದಾರೆ. ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇಲ್ಲಿಯವರೇ ಆಗಿರುವುದರಿಂದ ಅದು ಇಲ್ಲಿ ಹೆಚ್ಚು ಸಕ್ರಿಯವಾಗಿದೆ ಎಂದು ಅವರು ಹೇಳಿದರು.

ಬಲಪಂಥೀಯ ಗುಂಪುಗಳು ಚರ್ಚ್ ಗಳ ಮೇಲೆ ದಾಳಿ ನಡೆಸಬಹುದಾದ ಭೀತಿಯಿದೆ ಎಂದು ಕ್ಯಾಂಪ್ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಸುದ್ದಿಸಂಸ್ಥೆಗೆ ದೃಢಪಡಿಸಿದರು.

ಬುಧವಾರ ಬಿಷಪ್ ಗಳು ಮತ್ತು ಕ್ರಿಶ್ಚಿಯನ್ ನಾಯಕರ ನಿಯೋಗವೊಂದು ಬೆಳಗಾವಿ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ರಕ್ಷಣೆಯನ್ನು ಕೋರಿ ಅಹವಾಲನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News