ಮಡಿಕೇರಿ: ವಿಧಾನ ಪರಿಷತ್ ಚುನಾವಣಾ ಕಣದಿಂದ ಹಿಂದೆ ಸರಿದ ಜೆಡಿಎಸ್ ಅಭ್ಯರ್ಥಿ

Update: 2021-11-26 14:52 GMT
ಇಸಾಕ್ ಖಾನ್

ಮಡಿಕೇರಿ ನ.26 : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಅವಕಾಶ ಕಲ್ಪಿಸಬಾರದು ಎನ್ನುವ ಏಕೈಕ ಉದ್ದೇಶದಿಂದ ಜೆಡಿಎಸ್ ಅಭ್ಯರ್ಥಿ ಇಸಾಕ್ ಖಾನ್ ಅವರಿಗೆ ನಾಮಪತ್ರ ಹಿಂಪಡೆಯುವಂತೆ ಸೂಚನೆ ನೀಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗಣೇಶ್, ಚುನಾವಣೆಯಲ್ಲಿ ಸ್ಪರ್ಧಿಸಿದರೆ ಬಿಜೆಪಿಗೆ ಲಾಭ ಆಗುತ್ತೆ. ಕಾಂಗ್ರೆಸ್ ಕೂಡ ಹಣ ಪಡೆದು ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದೆ. ಈ ಎಲ್ಲಾ ಕಾರಣಗಳಿಂದ ನಾಮಪತ್ರ ಹಿಂಪಡೆಯಲಾಗಿದೆ ಎಂದು ಹೇಳಿದರು. ಕೊಡಗಿನ ಅಲ್ಪಸಂಖ್ಯಾತ ಕಾರ್ಯಕರ್ತನಿಗೆ ಟಿಕೆಟ್ ನಿಡಬೇಕೆಂದು ಜಿಲ್ಲಾ ಜೆಡಿಎಸ್ ನಿರ್ಧಾರ ಮಾಡಿದ್ದು, ಅದರಂತೆ ಹೈಕಮಾಂಡ್ ಮನವೊಲಿಸಿ ಬಿಫಾರಂ ಪಡೆಯಲಾಗಿತ್ತು. ಇದೀಗ ಕೆಲವು ಟೀಕೆ ಮತ್ತು ಅಪಪ್ರಚಾರದಿಂದ ಹೈಕಮಾಂಡ್ ಸೂಚನೆಯಂತೆ ನಾಮಪತ್ರ ಹಿಂಪಡೆಯಲಾಯಿತು ಎಂದು ಹೇಳಿದರು.

ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬೆಂಬಲ ನೀಡದೇ ತಟಸ್ಥವಾಗಿ ಉಳಿಯುವ ನಿರ್ಧಾರ ಮಾಡಲಾಗಿದೆ. ಯಾವ ಪಕ್ಷವೂ ನಮ್ಮ ಬೆಂಬಲ ಕೋರಿಲ್ಲ ಎಂದು ಇದೇ ಸಂದರ್ಭ ಕೆ.ಎಂ. ಗಣೇಶ್ ಸ್ಪಷ್ಟಪಡಿಸಿದರು. ಅಲ್ಪ ಸಂಖ್ಯಾತರು ಹೆಚ್ಚಾಗಿ ಕಾಂಗ್ರೆಸ್ ಹಿಂದೆಯೇ ಹೋಗುತ್ತಾರೆ. ಕಾಂಗ್ರೆಸ್‍ನವರು ಅಲ್ಪ ಸಂಖ್ಯಾತರಿಗೆ ಯಾವುದೇ ರೀತಿಯ ಸ್ಥಾನಮಾನ ನೀಡಿಲ್ಲ. ಇದು ಗುಲಾಮಗಿರಿ ಪದ್ಧತಿಗೆ ಅವಕಾಶ ಮಾಡಿಕೊಟ್ಟಂತೆ ಆಗಿದೆ ಎಂದು ಗಣೇಶ್ ಆರೋಪಿಸಿದರು. ಬಿಜೆಪಿಯನ್ನು ತೋರಿಸಿ ಕಾಂಗ್ರೆಸ್ ಅಲ್ಪ ಸಂಖ್ಯಾತರಿಗೆ ದ್ರೋಹ ಮಾಡುತ್ತಿದೆ ಎಂದು ಗಣೇಶ್ ಹೇಳಿದರು.

ಜೆಡಿಎಸ್ ಅಭ್ಯರ್ಥಿಯಾಗಿದ್ದ ಇಸಾಕ್ ಖಾನ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರು ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸಿ ನಾಮಪತ್ರ ಹಿಂಪಡೆಯುವಂತೆ ಸೂಚಿಸಿದರು. ಹೆಚ್.ಡಿ. ಕುಮಾರಸ್ವಾಮಿ ಅವರು ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ. ಅವರ ಮಾತು ತೃಪ್ತಿ ತಂದಿದೆ. ಹೀಗಾಗಿ ನಾಮಪತ್ರ ಹಿಂಪಡೆಯಲಾಗಿದೆ ಎಂದು ಹೇಳಿದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News