ಭ್ರಷ್ಟಾಚಾರ ಪ್ರಕರಣ: ಅಲಹಾಬಾದ್ ಹೈಕೋರ್ಟ್ ಮಾಜಿ ನ್ಯಾ.ಶುಕ್ಲಾ ವಿರುದ್ಧ ಕಾನೂನು ಕ್ರಮಕ್ಕೆ ಸಿಬಿಐಗೆ ಅನುಮತಿ

Update: 2021-11-27 14:26 GMT
 ಅಲಹಾಬಾದ್ ಹೈಕೋರ್ಟ್ (photo:PTI)

ಹೊಸದಿಲ್ಲಿ,ನ.27: ಭ್ರಷ್ಟಾಚಾರ ಪ್ರಕರಣದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಸ್.ಎನ್.ಶುಕ್ಲಾ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲು ಸಿಬಿಐಗೆ ಅನುಮತಿ ಲಭಿಸಿದೆ. ಶುಕ್ಲಾ ವಿರುದ್ಧದ ಆರೋಪಗಳು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಎ) ಲಂಚ ಪ್ರಕರಣಕ್ಕೆ ಸಂಬಂಧಿಸಿವೆ.

ಕಾನೂನು ಕ್ರಮಕ್ಕೆ ಮಂಜೂರಾತಿ ನೀಡುವ ಮೂಲಕ ಉಚ್ಚ ನ್ಯಾಯಾಲಯವು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲು ಸಿಬಿಐಗೆ ಅವಕಾಶ ಕಲ್ಪಿಸಿದೆ ಎಂದು ವರದಿಗಳು ತಿಳಿಸಿವೆ.

ಶುಕ್ಲಾ ವಿರುದ್ಧ ಕಾನೂನು ಕ್ರಮಕ್ಕೆ ಮಂಜೂರಾತಿ ಗುರುವಾರ ಸಂಜೆ ಲಭಿಸಿದೆ. ಅವರ ವಿರುದ್ಧ ತನಿಖೆಯು ಪೂರ್ಣಗೊಂಡಿದ್ದು, ದೋಷಾರೋಪಣ ಪಟ್ಟಿಯನ್ನು ಶೀಘ್ರವೇ ಸಲ್ಲಿಸಲಾಗುವುದು ಎಂದು ಸಿಬಿಐ ಅಧಿಕಾರಿಯೋರ್ವರು ತಿಳಿಸಿದರು.

2019 ಜುಲೈನಲ್ಲಿ ಆಗ ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಶುಕ್ಲಾ ವಿರುದ್ಧ ಪ್ರಕರಣವನ್ನು ದಾಖಲಿಸಲು ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ)ರು ಸಿಬಿಐಗೆ ಅನುಮತಿ ನೀಡಿದ್ದರು. ಆ ವರ್ಷದ ಡಿಸೆಂಬರ್‌ನಲ್ಲಿ ಸಿಬಿಐ ಶುಕ್ಲಾ ವಿರುದ್ಧ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ಗಳ ಹಾಲಿ ನ್ಯಾಯಾಧೀಶರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಮುನ್ನ ತನಿಖಾ ಸಂಸ್ಥೆಗಳು ಸಿಜೆಐಗೆ ಸಾಕ್ಷಾಧಾರಗಳನ್ನು ಸಲ್ಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು 1991ರಲ್ಲಿ ತನ್ನ ಆದೇಶದಲ್ಲಿ ತಿಳಿಸಿತ್ತು. ಇದೇ ಮೊದಲ ಬಾರಿಗೆ ಸಿಜೆಐ ಇಂತಹ ಮನವಿಯನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಎಂಸಿಐನಿಂದ ಅನುಮತಿ ನಿರಾಕರಿಸಲ್ಪಟ್ಟಿದ್ದ ಕೆಲವು ವೈದ್ಯಕೀಯ ಕಾಲೇಜುಗಳು ಈ ಹಗರಣದಲ್ಲಿ ಭಾಗಿಯಾಗಿವೆ. ಖಾಸಗಿ ಕ್ಷೇತ್ರದ ಪ್ರಸಾದ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಪರವಾಗಿ ಆದೇಶ ಹೊರಡಿಸಲು ಶುಕ್ಲಾ ಲಂಚವನ್ನು ಪಡೆದಿದ್ದರು ಎಂದು ಸಿಬಿಐ ಆರೋಪಿಸಿದೆ. ಈ ವ್ಯವಹಾರದಲ್ಲಿ ಮಧ್ಯವರ್ತಿಯೋರ್ವ ಪಾತ್ರ ವಹಿಸಿದ್ದು,ಕಾಲೇಜು ಆತನ ಮೂಲಕ ಲಂಚವನ್ನು ಪಾವತಿಸಿತ್ತು ಎನ್ನಲಾಗಿದೆ.

ಶುಕ್ಲಾರ ಜೊತೆಗೆ ಒಡಿಶಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಐ.ಎಂ.ಖುದ್ದೂಸಿ,ಪ್ರಸಾದ ಎಜ್ಯುಕೇಷನ್ ಟ್ರಸ್ಟ್‌ನ ಭಾವನಾ ಪಾಂಡೆ,ಭಗವಾನ ಪ್ರಸಾದ ಯಾದವ ಮತ್ತು ಪಲಾಶ ಯಾದವ ಹಾಗೂ ಮಧ್ಯವರ್ತಿ ಸುಧೀರ ಗಿರಿ ಅವರೂ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಸಿಬಿಐ ಈಗಾಗಲೇ ಖುದ್ದೂಸಿ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದೆ. ಅಪರಾಧ ನಡೆದ ಸಂದರ್ಭದಲ್ಲಿ ಅವರು ಸೇವೆಯಿಂದ ನಿವೃತ್ತರಾಗಿದ್ದರಿಂದ ಅವರ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ಅಗತ್ಯವಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News