'ಸಂವಿಧಾನ ಬದಲಿಸಿದರೆ ರಕ್ತಕ್ರಾಂತಿಯೇ ಆಗುತ್ತದೆ ಹುಷಾರ್': ಸಿದ್ದರಾಮಯ್ಯ

Update: 2021-11-27 16:54 GMT

ಮೈಸೂರು,ನ.27: ಸಂವಿಧಾನ ಬದಲಿಸಬೇಕು ಎಂದು ಪ್ರಯತ್ನ ಪಟ್ಟರೆ ಅದು ಎಂದಿಗೂ ಸಾಧ್ಯವಿಲ್ಲ, ಹಾಗೊಂದು ವೇಳೆ ಸಂವಿಧಾನ ಬದಲಿಸಿದರೆ ರಕ್ತಕ್ರಾಂತಿಯೇ ಆಗುತ್ತದೆ ಹುಷಾರ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನ ಬದಲಾವಣೆ ಮಾಡಬೇಕು ಎನ್ನುವವರಿಗೆ ಎಚ್ಚರಿಕೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯ ಶ್ರೀ ಎನ್.ರಾಚಯ್ಯ ಅಧ್ಯಯನ ಪೀಠ ಹಾಗೂ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಶನಿವಾರ ಮಾನಸಗಂಗೋತ್ರಿಯ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಜಿ ಮೇಯರ್ ನಾರಾಯಣ್ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ “ಪೌರಬಂಧು” ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯದವರೇ ಆದ ಕೇಂದ್ರ ಮಂತ್ರಿಯೊಬ್ಬರು ಸಂವಿಧಾನ ಬದಲಿಸುತ್ತೇನೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿಯ ಯಾವೊಬ್ಬ ನಾಯಕರೂ ವಿರೋಧಿಸಲಿಲ್ಲ. ಆ ಪಕ್ಷದಲ್ಲಿರುವ ದಲಿತ ನಾಯಕರಾದ ರಮೇಶ್ ಜಿಗಜಿಣಗಿ, ಗೋವಿಂದ ಕಾರಜೋಳ, ನಾರಾಯಣಸ್ವಾಮಿ ಸೇರಿದಂತೆ ಯಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಅವರೆಲ್ಲರೂ ಬಿಜೆಪಿ ಸೇರಿರುವುದು ಸ್ವಾರ್ಥಕ್ಕಾಗಿಯೇ ಹೊರತು ದಲಿತರ ಉದ್ಧಾರಕ್ಕಾಗಿ ಅಲ್ಲ. ಇದನ್ನೆ ನಾನು ಸಿಂಧಗಿಯಲ್ಲಿ ಹೇಳಿದ್ದು. ಈ ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚಿ ವಿವಾದ ಎಬ್ಬಿಸದರು. ಆ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ ಎಂದು ಪುನರುಚ್ಚರಿಸಿದರು.

ಬಿಜೆಪಿಯಲ್ಲಿರುವ ದಲಿತ ನಾಯಕರು ಸ್ವಾರ್ಥಿಗಳು. ಆದರೆ, ಮಾಜಿ ಮೇಯರ್ ನಾರಾಯಣ್ ಎಂದೂ ಸ್ವಾರ್ಥಿಯಾಗಲಿಲ್ಲ. ನಮ್ಮ ಪಕ್ಷದವರಾಗಿದ್ದರೂ ನಮ್ಮದೇ ಸರ್ಕಾರದ ವಿರುದ್ಧ ಹೋರಾಟ ಮಾಡಿ ಪೌರಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಲು ಹೋರಾಡಿದರು. ತಾನೊಬ್ಬ ಪೌರಕಾರ್ಮಿಕನಾಗಿದ್ದುಕೊಂಡು ರಾಜಕೀಯ ಪ್ರವೇಶಿಸಿ ಬೆಳೆದರು ಎಂದಿಗೂ ಮೂಲವನ್ನು ಮರೆಯಲಿಲ್ಲ. ಈಗಲೂ ನನ್ನ ಬಳಿ ಬಂದರೆ ಪೌರಕಾರ್ಮಿಕರ ಕೆಲಸಕ್ಕಾಗಿಯೇ ಬರುತ್ತಾರೆ. ಪೌರಕಾರ್ಮಿಕರ ಸಂಬಳ 7ರಿಂದ  17 ಸಾವಿರ ರೂ.ಗೆ ಹೆಚ್ಚಾಗಲು ನಾರಾಯಣ್ ಹೋರಾಟವೇ ಕಾರಣ. ನಮ್ಮ ಸರ್ಕಾರ ಮತ್ತೊಮ್ಮೆ ಬಂದಿದ್ದರೆ 1.20 ಲಕ್ಷ ಮಂದಿ ಪೌರಕಾರ್ಮಿಕರನ್ನು ಕಾಯಂ ಮಾಡುತ್ತಿದ್ದೆ. ಮುಂದಿನ ಸಲ ಬಂದರೆ ಖಂಡಿತಾ ಮಾಡುತ್ತೇನೆ. ಯಾರದೇ ವಿರೋಧ ಬಂದರೂ ಹೆದರುವುದಿಲ್ಲ ಎಂದರು.

ಇದೇ ವೇಳೆ ಮಾಜಿ ಮೇಯರ್ ನಾರಾಯಣ್ ಹಾಗೂ ಪತ್ನಿ ಜಯಮ್ಮ ನಾರಾಯಣ್ ಅವರನ್ನು ಅಭಿನಂದಿಸಲಾಯಿತು. ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅಧ್ಯತೆ ವಹಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಶಾಸಕ ಎಲ್.ನಾಗೇಂದ್ರ, ಹಿರಿಯ ಪತ್ರಕರ್ತರಾದ ಕೆ.ಶಿವಕುಮಾರ್, ಶ್ರೀ ಎನ್.ರಾಚಯ್ಯ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಎಚ್.ಬಿ.ಮಲ್ಲಿಕಾರ್ಜುನಸ್ವಾಮಿ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಮುಜಾಫರ್ ಅಸಾದಿ ಭಾಗವಹಿಸಿದ್ದರು. 

ಪೌರಕಾರ್ಮಿಕನಾಗಿದ್ದುಕೊಂಡು ಮೇಯರ್ ಹಂತಕ್ಕೆ ರಾಜಕೀಯವಾಗಿ ಬೆಳೆದಿರಬಹುದು. ನಾನು ಅಧಿಕಾರಕ್ಕಾಗಲಿ, ವೈಯಕ್ತಿಕ ಹಿತಾಸಕ್ತಿಗಾಗಿ ಯಾವತ್ತೂ ಹೋರಾಟ ಮಾಡಿಲ್ಲ. ನನಗೆ ಅಧಿಕಾರ ಬೇಡ. ನನ್ನ ಜನಗಳಾದ ಪೌರಕಾರ್ಮಿಕರ ವೃತ್ತಿ ಕಾಯಂ ಆದರೆ ಅದೇ ನನಗೆ ಖುಷಿ. 

   -ನಾರಾಯಣ್,  ಮಾಜಿ ಮೇಯರ್.

ನಾರಾಯಣ್ ಅವರು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿದ್ದಾಗ ಪೌರಕಾರ್ಮಿಕರನ್ನು ಸಿಂಗಾಪೂರ್‍ಗೆ ಕಳಿಸಲು ಸಿದ್ದರಾಮಯ್ಯ ಅವರು ನಿರ್ಧರಿಸಿದ್ದರು. ಕೆಲವು ಐಎಎಸ್ ಅಧಿಕಾರಿಗಳು ವಿರೋಧಿಸಿದಾಗ ನೀವು ಮಾತ್ರ ವಿದೇಶಕ್ಕೆ ಹೋಗಬಹುದು, ಪೌರಕಾರ್ಮಿಕರು ಹೋಗಬಾರದೇನ್ರಿ ಅಂದಿದ್ದರು. ಮೈಸೂರಿನ ಕಟ್ಟಕಡೆಯ ವ್ಯಕ್ತಿ ಮೊದಲ ಪ್ರಜೆ(ಮೇಯರ್) ಆಗಲು ಸಿದ್ದರಾಮಯ್ಯ ಅವರೇ ಕಾರಣ.

 ಕೆಪಿಸಿಸಿ ಕಾರ್ಯಾಧ್ಯಕ್ಷ.

ನಗರಪಾಲಿಕೆಯಲ್ಲಿ ಚಿಕ್ಕರಾಮಯ್ಯ, ಈರಮ್ಮ ಕೂಡ ಪೌರಕಾರ್ಮಿಕರಾಗಿ ದುಡಿದಿದ್ದಾರೆ. ಇವರ ಪುತ್ರ ನಾರಾಯಣ್ ಆ ಕಾಲಕ್ಕೆ ಎಸ್ಸೆಸ್ಸೆಲ್ಸಿ ಓದಿ ರೈಲ್ವೆ ಇಲಾಖೆ, ಜಾವಾ ಫ್ಯಾಕ್ಟರಿಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಆರಂಭಿಸಿದರು. ನೋಡುವುದಕ್ಕೆ ಸಮಾಜವಾದ ಸಿದ್ಧಾಂತಿ ತರಹ ಕಂಡರೂ ಅವರೊಬ್ಬ ಪಕ್ಕಾ ಕಮ್ಯುನಿಸ್ಟ್‍ವಾದಿ. ರಾಯಲ್ ಕುಟುಂಬದವರು ತಮ್ಮ ಹಿನ್ನೆಲೆ ಬಗ್ಗೆ ಕಾಫಿ ಟೇಬಲ್ ಮಾಡಿದರೆ ಅದೇ ನಾರಾಯಣ್ ಯಾವಾಗಲೂ ತಮ್ಮವರಾದ ಪೌರಕಾರ್ಮಿಕರ ಬಗ್ಗೆ ಹೋರಾಟ ಮಾಡುತ್ತಾರೆ. 

- ಕೆ.ಶಿವಕುಮಾರ್,   ಹಿರಿಯ ಪತ್ರಕರ್ತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News