ಟೊಮ್ಯಾಟೊ ಬೆಲೆ ದಿಢೀರ್ ಕುಸಿತ

Update: 2021-11-28 04:38 GMT

ಬೆಂಗಳೂರು: ಕಳೆದ ಹದಿನೈದು ದಿನಗಳಿಂದ ಏರುಮುಖಿಯಾಗಿದ್ದ ಟೊಮ್ಯಾಟೊ ಬೆಲೆ ದಿಢೀರನೇ ಕುಸಿದಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ.

ದೇಶದ ವಿವಿಧ ಭಾಗಗಳಿಂದ ರಾಜ್ಯಕ್ಕೆ ಟೊಮ್ಯಾಟೊ ಸರಬರಾಜು ಹೆಚ್ಚಿದ್ದು, ಶನಿವಾರ ಬೆಂಗಳೂರಿನಲ್ಲಿ ಟೊಮ್ಯಾಟೊ ಬೆಲೆ ದಿಢೀರ್ ಕುಸಿತ ಕಂಡಿದೆ. ಕೆಲ ದಿನಗಳ ಹಿಂದೆ 15 ಕೆಜಿ ಟೊಮ್ಯಾಟೊ ಬಾಕ್ಸ್‌ನ ಬೆಲೆ 3100 ರೂಪಾಯಿ ಇದ್ದುದು ಇದೀಗ ದಿಢೀರನೇ 400-600 ರೂಪಾಯಿಗೆ ಕುಸಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಲ ದಿನಗಳ ಹಿಂದೆ 110-130 ರೂಪಾಯಿ ಇದ್ದ ಬೆಲೆ ಇದೀಗ 50-70ರ ಆಸುಪಾಸಿನಲ್ಲಿದೆ.

ಇಂಧನ ಬೆಲೆಯಿಂದ ಹೈರಾಣಾಗಿರುವ ಗ್ರಾಹಕರಿಗೆ ಚಿಂತೆ ಹೆಚ್ಚಿಸಿದ್ದ ಟೊಮ್ಯಾಟೊ ಬೆಲೆ, ಇದೀಗ ಇಳಿದಿರುವುದು ಗ್ರಾಹಕರಿಗೆ ಸಂತಸ ತಂದಿದ್ದರೂ, ಟೊಮ್ಯಾಟೊ ಬೆಲೆ ದಿಢೀರ್ ಕುಸಿತ ಕಂಡಿರುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.

"ಬೆಂಗಳೂರು ಸುತ್ತಮುತ್ತಲಿನ ಅಂದರೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ, ತಮಿಳುನಾಡಿನ ಗಡಿ ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಉತ್ಪಾದನೆ ಕಡಿಮೆಯಾಗಿ ಟೊಮ್ಯಾಟೊ ಬೆಲೆ ಗಗನಕ್ಕೇರಿತ್ತು. 15 ಕೆಜಿ ಬಾಕ್ಸ್ ಟೊಮ್ಯಾಟೊ ಬೆಲೆ 1400-1600ಕ್ಕೆ ತಲುಪಿತು. ಪೂರೈಕೆ ಕುಸಿತದಿಂದ ದಿಢೀರನೇ 3000 ರೂಪಾಯಿಗೆ ಅಲ್ಪಾವಧಿಯಲ್ಲೇ ತಲುಪಿತು. ಟೊಮ್ಯಾಟೊ ಹರಾಜಿನ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಉತ್ತರ ಕರ್ನಾಟಕ ಜಿಲ್ಲೆಗಳು ಮತ್ತು ಮಹಾರಾಷ್ಟ್ರ ಹಾಗೂ ಆಂಧ್ರದ ನೆರೆಯ ಜಿಲ್ಲೆಗಳ ಬೆಳೆಗಾರರ ಗಮನ ಸೆಳೆಯಿತು. ಇದರಿಂದಾಗಿ ಈ ಭಾಗದಿಂದ ಪೂರೈಕೆ ಹೆಚ್ಚಿತು. ಇದು ಬೆಲೆ ಕುಸಿಯಲು ಕಾರಣ" ಎಂದು ತರಕಾರಿ ಬೆಲೆಯ ಮೇಲೆ ನಿಗಾ ಇಟ್ಟಿರುವ ತಜ್ಞರು ಹೇಳುತ್ತಾರೆ.

ಏತನ್ಮಧ್ಯೆ ದಕ್ಷಿಣ ಒಳನಾಡಿನಲ್ಲಿ ಮಳೆ ನಿಂತಿದ್ದು, ಸ್ಥಳೀಯವಾಗಿ ಬೆಳೆದ ಟೊಮ್ಯಾಟೊ ಮಾರುಕಟ್ಟೆಗೆ ಬರುತ್ತಿದೆ. ಸದ್ಯಕ್ಕೆ ಬಾಕ್ಸ್ ಟೊಮ್ಯಾಟೊ ಬೆಲೆ 600-800ರ ಆಸುಪಾಸಿನಲ್ಲಿದೆ ಎಂದು ಕೆ.ಆರ್.ಮಾರುಕಟ್ಟೆಯ ಡೀಲರ್ ರಾಜೇಂದ್ರ ಹೇಳುತ್ತಾರೆ. ಮಳೆ ಮುಂದುವರಿಯದಿದ್ದರೆ, ಟೊಮ್ಯಾಟೊ ಬೆಲೆ ಕೆಲವೇ ದಿನಗಳಲ್ಲಿ 20-40 ರೂಪಾಯಿಗೆ ಇಳಿಯಲಿದೆ ಎಂದು ಅವರು ಅಂದಾಜಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News