`ಸುಳ್ಳು ಜಾತಿ ಪ್ರಮಾಣ ಪತ್ರ' ದೌರ್ಜನ್ಯ ತಡೆ ಕಾಯ್ದೆ ಅನ್ವಯ ಆಗುವುದಿಲ್ಲ: ಹೈಕೋರ್ಟ್

Update: 2021-11-28 13:32 GMT

 ಬೆಂಗಳೂರು, ನ. 28: ಸರಕಾರಿ ಉದ್ಯೋಗವನ್ನು ಪಡೆದುಕೊಳ್ಳಲು `ಸುಳ್ಳು ಜಾತಿ ಪ್ರಮಾಣ ಪತ್ರ' ಸಲ್ಲಿಸಿದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಪರಿಶಿಷ್ಟ ಜಾತಿಗೆ ಸೇರಿರುವುದಾಗಿ ನಕಲಿ ಪ್ರಮಾಣಪತ್ರ ಸಲ್ಲಿಸಿದ ಆರೋಪ ಹೊತ್ತಿರುವ ಸರಕಾರಿ ಶಿಕ್ಷಕಿಯೊಬ್ಬರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಪ್ರಕರಣದಲ್ಲಿ ಜಾಮೀನು ನೀಡಲು ನಿರಾಕರಿಸಿದ್ದ ಕೋಲಾರ ಎಸ್ಸಿ-ಎಸ್ಟಿ ವಿಶೇಷ ಕೋರ್ಟ್ ಆದೇಶ ಪ್ರಶ್ನಿಸಿ ಸರಕಾರಿ ಶಾಲೆಯ ಶಿಕ್ಷಕಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಮಾನ್ಯ ಮಾಡಿರುವ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ಮಾಡಿದೆ. 

ಏನಿದು ಪ್ರಕರಣ: ಒಕ್ಕಲಿಗ ಸಮುದಾಯದ ಮಹಿಳೆಯೊಬ್ಬರು, ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದರು. ಬಳಿಕ ಸರಕಾರಿ ಶಿಕ್ಷಕಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಹುದ್ದೆಯಲ್ಲಿ ಎಸ್ಸಿ ಮೀಸಲಾತಿ ಪಡೆದುಕೊಳ್ಳುವ ಉದ್ದೇಶದಿಂದ ತಾವು ಕೂಡ ಎಸ್ಸಿಗೆ ಸೇರಿರುವುದಾಗಿ ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂಬ ಆರೋಪ ಮಹಿಳೆ ಮೇಲಿದೆ. ಅಲ್ಲದೆ, ಎಸ್ಸಿ ಪ್ರಮಾಣಪತ್ರ ಸಲ್ಲಿಸಿದ್ದರೂ ಸಾಮಾನ್ಯ ವರ್ಗದ ಅಡಿಯಲ್ಲೇ ಮಹಿಳೆ ಉದ್ಯೋಗಕ್ಕೆ ಆಯ್ಕೆಯಾಗಿದ್ದರು. 

ಆದರೆ, ಮಹಿಳೆ ಎಸ್ಸಿ ವರ್ಗಕ್ಕೆ ಸೇರಿದ್ದಾರೆಂಬುದನ್ನು ದೃಢೀಕರಿಸಿ ಯಾವುದೇ ಪ್ರಮಾಣಪತ್ರ ನೀಡಿಲ್ಲ ಎಂದು ಕೋಲಾರ ತಹಶೀಲ್ದಾರ್ ಸ್ಪಷ್ಟಪಡಿಸಿದ್ದರು. ಇದರಿಂದ, ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪ ಸಂಬಂಧ ಶಿಕ್ಷಕಿ ವಿರುದ್ಧ ಕೋಲಾರ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಇನ್‍ಸ್ಪೆಕ್ಟರ್ ಎಫ್‍ಐಆರ್ ದಾಖಲಿಸಿದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News