ಶಿವಮೊಗ್ಗ: ಬ್ಯಾಂಕ್‍ನಲ್ಲಿ ಶಾರ್ಟ್ ಸರ್ಕ್ಯೂಟ್; ಲಾಕರ್ ಹೊರತು ಎಲ್ಲವೂ ಬೆಂಕಿಗಾಹುತಿ

Update: 2021-11-28 13:37 GMT

ಶಿವಮೊಗ್ಗ, ನ.28, ಎಸ್‍ಬಿಐ ಬ್ಯಾಂಕಿನ ವಿದ್ಯಾನಗರ ಶಾಖೆಯಲ್ಲಿ ಭಾನುವಾರ ಕ್ಯಾಷ್ ಕೌಂಟರ್ ಬಳಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಅಂದಾಜು 3-4 ಲಕ್ಷ ಮೌಲ್ಯದ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ.

ಯುಪಿಎಸ್‍ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ. ಭಾನುವಾರದಿಂದಾಗಿ ಬ್ಯಾಂಕ್‍ಗೆ ರಜೆ ಇದ್ದು, ಬೆಂಕಿ ತಾಕಿ ಸಾಕಷ್ಟು ಹೊತ್ತಾದ ನಂತರ ಕಿಟಕಿಯಿಂದ ಹೊಗೆ ಬರಲಾರಂಭಿಸಿದೆ. ಆಗ ಜನರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸಾಕಷ್ಟು ಪ್ರಮಾಣನದಲ್ಲಿ ಹೊಗೆ ತುಂಬಿಕೊಂಡಿದ್ದನ್ನು ಸಿಬ್ಬಂದಿ ಎಕ್ಸ್ಯುಸ್ ಫ್ಯಾನ್ ಮೂಲಕ ಹೊರತೆಗೆದಿದ್ದಾರೆ.

ಬ್ಯಾಂಕ್‍ನಲ್ಲಿದ್ದ 6 ಕಂಪ್ಯೂಟರ್, 6 ಪ್ರಿಂಟರ್, 6 ಫ್ಯಾನ್, 6 ಸ್ಪೀಕರ್, ಎಸಿ, ಸಿಸಿ ಟಿವಿ, ಕೌಂಟಿಂಗ್ ಮೆಷಿನ್, ಸ್ಕ್ಯಾನರ್, ಪೀಠೋಪಕರಣ, ಟಿವಿ, ಸ್ಮೋಕ್ ಡಿಟೆಕ್ಟರ್ ಸೇರಿದಂತೆ ಬ್ಯಾಂಕ್ ಒಳಗಿನ ಪೀಠೋಪಕರಣ, ದಾಖಲೆಗಳು ಸುಟ್ಟು ಕರಕಲಾಗಿವೆ. 

ಬ್ಯಾಂಕ್ ಮ್ಯಾನೇಜರ್, ಡಿವೈಎಸ್ಪಿ ಅವರ ಸಮ್ಮುಖದಲ್ಲಿ ಲಾಕರ್ ಬೀಗ ತೆಗೆದು ಪರಿಶೀಲಿಸಿದ್ದು, ಅದೃಷ್ಟವಷಾತ್ ಲಾಕರ್‍ಗೆ ಯಾವುದೇ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಕೋಟೆ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. 

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್.ಅಶೋಕ್ ಕುಮಾರ್, ಠಾಣಾಧಿಕಾರಿ ಪ್ರವೀಣ್ ಮತ್ತು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News