ಹಣಕ್ಕಾಗಿ ಅಂಧ ಸ್ನೇಹಿತನ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

Update: 2021-11-28 13:45 GMT

ಹುಬ್ಬಳ್ಳಿ, ನ. 28: ಹಣಕ್ಕಾಗಿ ಅಂಧ ಸ್ನೇಹಿತನನ್ನು ಹತ್ಯೆ ಮಾಡಿದ ಆರೋಪಿಗೆ ಹುಬ್ಬಳ್ಳಿಯ 1ನೇ ಸೇಷನ್ ಕೋರ್ಟ್, ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ.ದಂಡ ವಿಧಿಸಿ ಆದೇಶ ಹೊರಡಿಸಿದೆ.  

ನವಲಗುಂದ ತಾಲೂಕಿನ ಮೊರಬ ಗ್ರಾಮದ ನಿವಾಸಿ ಜಗದೀಶ ಶಿರಗುಪ್ಪಿ ಎಂಬುವವರನ್ನು ಕೊಲೆ ಮಾಡಿದ್ದ ಆರೋಪಿ ಬಸವರಾಜಗೆ ನ್ಯಾಯಾಧೀಶ ಎನ್.ಬಿರಾದಾರ ದೇವೇಂದ್ರಪ್ಪ ಅವರಿದ್ದ ನ್ಯಾಯಪೀಠ, ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ. 

ಏನಿದು ಪ್ರಕರಣ: ಜಗದೀಶ್ ಶಿರಗುಪ್ಪಿ ಹುಟ್ಟು ಕುರುಡನಾಗಿದ್ದು, ತನ್ನ ಬಳಿಯಿದ್ದ 1.50 ಲಕ್ಷ ರೂ.ಹಣವನ್ನು ತನ್ನ ಸ್ನೇಹಿತನಿಗೆ ಕೊಡುವ ಉದ್ದೇಶದಿಂದ ಮತ್ತೋರ್ವ ಗೆಳೆಯನಾಗಿದ್ದ ಆರೋಪಿ ಬಸವರಾಜ ಜಿಗಳೂರುನನ್ನು ಜೊತೆಗೆ ಕರೆದುಕೊಂಡು ಗದುಗಿನ ಕಾರ್ಪೊರೇಷನ್ ಬ್ಯಾಂಕ್ ಹೋಗಿ ಹಣವನ್ನು ಡ್ರಾ ಮಾಡಿ ಹುಬ್ಬಳ್ಳಿಗೆ ಬಂದಿದ್ದಾರೆ. 

ಆಗ ಹಣದ ಆಸೆಗೆ ಬಸವರಾಜ ಜಿಗಳೂರು ಜಗದೀಶ್ ಶಿರಗುಪ್ಪಿ ಅವರನ್ನು ಉಣಕಲ್ ಸಿದ್ದಪ್ಪಜ್ಜನ ಗುಡಿಯ ಹಿಂಭಾಗದಲ್ಲಿ ಉಣಕಲ್ ಕೆರೆ ಕೋಡಿಯ ಹತ್ತಿರ ಕರೆದುಕೊಂಡು ಹೋಗಿ 2015 ಮೇ.23 ರಾತ್ರಿ 8 ರಿಂದ 8.30ರ ಅವಧಿಯಲ್ಲಿ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದನು. 

ಬಳಿಕ ಆತನ ಬಳಿಯಿದ್ದ 1.40 ಲಕ್ಷ ರೂ. ಹಣ ದೋಚಿಕೊಂಡು ಹೋಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿತನ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸವರಾಜ ಜಿಗಳೂರು ಮಾಡಿದ ಕೊಲೆ ಪ್ರಕರಣ ಸಾಬೀತಾಗಿದ್ದು ಅಪರಾಧಿಗೆ ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ ದಂಡ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News